ಜ.30: ಸೌಹಾರ್ದ ಮಾನವ ಸರಪಳಿ
ಮಂಗಳೂರು, ಜ.24: ರಾಜ್ಯದಲ್ಲಿ ಕೋಮು ಸೌಹಾರ್ದವನ್ನು ಕೆಡಿಸಿ, ಕೋಮುಜ್ವಾಲೆ ಹಬ್ಬಿಸುವ ಪ್ರಯತ್ನವನ್ನು ತಡೆಗಟ್ಟುವ ಸಲುವಾಗಿ ರಾಜ್ಯದ ಪ್ರಮುಖರಾದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾ.ವಿ.ಗೋಪಾಲ ಗೌಡ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ಡಾ.ಜಿ.ರಾಮಕೃಷ್ಣ, ಹೈಕೋರ್ಟು ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ ದಾಸ್, ಚಿಂತಕ ಕೋ. ಚೆನ್ನಬಸಪ್ಪಅವರನ್ನು ಒಳಗೊಂಡ ಸಂಚಾಲಕ ಸಮಿತಿಯು ಜ.30ರಂದು ರಾಜ್ಯಾದ್ಯಂತ ‘ಸೌಹಾರ್ದತೆಗಾಗಿ ಕರ್ನಾಟಕ ಮಾನವ ಸರಪಳಿ’ ಹಮ್ಮಿಕೊಂಡಿದೆ.
ತಾಲೂಕು ಕೇಂದ್ರಗಳಾದ ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ (ಬಿಸಿರೋಡ್) ಮತ್ತು ಮಂಗಳೂರು ನಗರದ ನೆಹರೂ ಮೈದಾನಿನ ಸುತ್ತ ಏಕಕಾಲಕ್ಕೆ ಮಾನವ ಸರಪಳಿ ನಡೆಯಲಿದೆ. ಅಂದು ಅಪರಾಹ್ನ 3 ಗಂಟೆಗೆ ನಿಗದಿತ ಸ್ಥಳದಲ್ಲಿ ಸಹಭಾಗಿಗಳು ಒಗ್ಗೂಡಿ 4 ಗಂಟೆಗೆ ಪರಸ್ಪರ ಕೈ ಜೋಡಿಸಿ 10 ನಿಮಿಷಗಳ ಕಾಲ ಮಾನವ ಸರಪಳಿ ರಚಿಸುವರು. ಶಾಂತಿ, ಸಾಮರಸ್ಯದ ಪ್ರತಿಜ್ಞೆ ಸ್ವೀಕರಿಸಲಿರುವರು. ಬಳಿಕ ನೆಹರೂ ಮೈದಾನದಲ್ಲಿ ಸೌಹಾರ್ದ ಸಮಾವೇಶ ನಡೆಯಲಿದ್ದು, ಪತ್ರಕರ್ತ ದಿನೇಶ್ ಅಮೀೀನ್ ಮಟ್ಟು ಮಾತನಾಡಲಿರುವರು.
ಚಿಂತಕ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಸಾಹಿತಿ ಚಂದ್ರಕಲಾ ನಂದಾವರ, ಕೊಂಕಣಿ ಸಾತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಒಝಾರಿಯೊ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ಮತ್ತು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







