ಶಾಸಕ ಸುನೀಲ್ ಕುಮಾರ್ ಹೇಳಿಕೆಗೆ ವಿವಿಧ ಸಂಘಟನೆ ಖಂಡನೆ
ಮಂಗಳೂರು, ಜ.24: ಶಾಸಕ ಸುನೀಲ್ ಕುಮಾರ್ ಬಂಟ್ವಾಳ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೇವರ ಹೆಸರಿನಲ್ಲಿ ಮತಯಾಚನೆ ಮಾಡಿರುವುದನ್ನು ವಿವಿಧ ಸಂಘಟನೆಗಳು ಖಂಡಿಸಿವೆ
ಮುಸ್ಲಿಮ್ ಒಕ್ಕೂಟ: ಮತೀಯ ಉದ್ವಿಗ್ನತೆಗೊಂಡಿದ್ದ ಬಂಟ್ವಾಳದ ಕಲ್ಲಡ್ಕ ಪ್ರದೇಶವು ಸಹಜ ಸ್ಥಿತಿಯತ್ತ ಮರಳುತ್ತಿದೆ. ಶಾಂತಿಯು ಮರೀಚಿಕೆಯಾದ ಈ ಸಂದರ್ಭ ಸ್ಥಳೀಯ ರಾಜಕಾರಣಿಗಳು, ಸಚಿವರು ಮತ್ತು ಪ್ರಮುಖವಾಗಿ ಶಾಸಕ ಸುನಿಲ್ ಕುಮಾರ್ ದೇವರ ಹೆಸರಲ್ಲಿ ಮತಯಾಚನೆ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಮುಸ್ಲಿಮ್ ಒಕ್ಕೂಟ ಖಂಡಿಸಿವೆ.
ದೇವರು ಮತ್ತು ಧಾರ್ಮಿಕ ಪುರುಷರ ಹೆಸರನ್ನು ಎಳೆದು ತಂದು ಚುನಾವಣೆಗೆ ಸ್ಪರ್ಧಿಗಳನ್ನಾಗಿಸುವಂತಹ ಬೆಳವಣಿಗೆ ವಿಷಾದನೀಯ. ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ ಮತ್ತು ಸಾಧನೆಗಳ ಪ್ರಗತಿಯನ್ನು ಪರಿಚಯಿಸಿ ಮತಯಾಚಿಸಬೇಕಾದ ರಾಜಕಾರಣಿಗಳು ಮತೀಯ ಉದ್ವಿಗ್ನತೆಯನ್ನು ಸೃಷ್ಟಿಸಿ ಜನರ ಭಾವನೆಗಳನ್ನು ಬಂಡವಾಳವಾಗಿಸಿಕೊಂಡು ಪ್ರಚೋದನಕಾರಿ ಭಾಷಣಗೈಯುವುದನ್ನು ತಡೆಗಟ್ಟಬೇಕು ಎಂದು ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಒತ್ತಾಯಿಸಿದ್ದಾರೆ.
ಮಂಗಳೂರು ಸೆಂಟ್ರಲ್ ಕಮಿಟಿ: ಚುನಾವಣೆ ಸಮೀಪಿಸುತ್ತಿರುವಾಗ ಶಾಸಕ ಸುನೀಲ್ ಕುಮಾರ್ ಅಲ್ಲಾಹ್ ಮತ್ತು ರಾಮನನ್ನು ಎಳೆದು ತರುವ ಅಗತ್ಯವಿರಲಿಲ್ಲ. ಇದು ಜನರ ನಂಬಿಕೆಯ ಮೇಲೆ ಶಾಸಕರು ಮಾಡಿದ ಪ್ರಹಾರವಾಗಿದೆ. ಜನರನ್ನು ಮತೀಯ ಭಾವನೆ ಕೆರಳಿಸುವ ಅಶಾಂತಿ ಸೃಷ್ಟಿಸಲು ಸಂಚು ನಡೆಸುವ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದರೆ ಸಾಲದು. ಅವರನ್ನು ಬಂಧಿಸಿ ಕಾನೂನಿಗೆ ಎಲ್ಲರೂ ಸಮಾನರು ಎಂದು ತೋರಿಸಬೇಕಿದೆ. ಆ ಮೂಲಕ ಜನರಲ್ಲೂ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕಾರಣಿಗಳು, ಜನಪ್ರತಿನಿಧಿಗಳು ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ನಿರ್ಮಿಸುವ ಅಪಾಯವಿದೆ. ಜಿಲ್ಲೆಯಲ್ಲಿ ಶಾಂತಿ ನೆಲೆಸುವ ಸಲುವಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಪಕ್ಷಾತೀತವಾಗಿ ಇಂತಹ ಹೇಳಿಕೆ ನೀಡುವವರ ವಿರುದ್ಧ ಕ್ರಮ ಜರಗಿಸಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.







