ಫೆ. 3ರಿಂದ ತಲಪಾಡಿಯಲ್ಲಿ 300 ಕಿ.ಮೀ. ಜಾಥಾಕ್ಕೆ ಚಾಲನೆ
ಕಾಂಗ್ರೆಸ್ ಮೀನುಗಾರರ ಸಮಿತಿಯಿಂದ ಕರಾವಳಿಯಲ್ಲಿ ಜಾಥಾ
ಮಂಗಳೂರು, ಜ.24: ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಮೀನುಗಾರರ ಸಮಿತಿಯು ಕರಾವಳಿಯುದ್ದಕ್ಕೂ 300 ಕಿ.ಮೀ.ಗಳ ಬೃಹತ್ ಜಾಥಾ ನಡೆಸಲು ಉದ್ದೇಶಿಸಿದೆ. ಫೆ.3ರಂದು ತಲಪಾಡಿಯಲ್ಲಿ ‘ಕರ್ನಾಟಕ ನವ ನಿರ್ಮಾಣಕ್ಕಾಗಿ ಕಾಂಗ್ರೆಸ್ ಸಾಧನಾ ಜಾಥಾ’ ಆರಂಭವಾಗಲಿದ್ದು, ಫೆ.6ರಂದು ಕಾರವಾರದಲ್ಲಿ ಸಮಾರೋಪಗೊಳ್ಳಲಿದೆ ಎಂದು ಕಾಂಗ್ರೆಸ್ ಮೀನುಗಾರರ ಸಮಿತಿಯ ರಾಜ್ಯಾಧ್ಯಕ್ಷ ಯು.ಆರ್. ಸಭಾಪತಿ ತಿಳಿಸಿದ್ದಾರೆ.
ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ 12 ವಿಧಾನಸಭಾ ಕ್ಷೇತ್ರಗಳಲ್ಲಿ ಜಾಥಾ ಸಂಚರಿಸಲಿದ್ದು, ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಬಹಿರಂಗ ಸಭೆಗಳನ್ನು ಆಯೋಜಿಸಲಾಗುವುದು. ಮೀನುಗಾರರಿಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನೊಳಗೊಂಡ 25 ವಿವಿಧ ಬಗೆಯ ಟ್ಯಾಬ್ಲೊಗಳು ಜಾಥಾದಲ್ಲಿ ಇರಲಿವೆ. ಅವುಗಳಲ್ಲಿ ವಿವಿಧ ಹಾಡುಗಾರರಿಂದ ಸಂಗೀತವನ್ನೂ ಅಳವಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಎಲ್ಲೆಲ್ಲಿ ಸಂಚಾರ
ಫೆ.3ರಂದು ಬೆಳಗ್ಗೆ 11 ಗಂಟೆಗೆ ತಲಪಾಡಿಯಲ್ಲಿ ಜಾಥಾಕ್ಕೆ ಚಾಲನೆ ದೊರೆಯಲಿದೆ. ಅಲ್ಲಿಂದ ಜಾಥಾ ಹೊರಟು ಸಂಜೆ 4 ಗಂಟೆಗೆ ಮಂಗಳೂರು, 6.30ಕ್ಕೆ ಸುರತ್ಕಲ್, ಫೆ.4ರಂದು ಬೆಳಗ್ಗೆ 11 ಗಂಟೆಗೆ ಮುಲ್ಕಿ, ಸಂಜೆ 4ಕ್ಕೆ ಉಡುಪಿ ಜಿಲ್ಲೆಯ ಕಾಪು, ಸಂಜೆ 6.30ಕ್ಕೆ ಉಡುಪಿಯಲ್ಲಿ ಬಹಿರಂಗ ಸಭೆಗಳು ನಡೆಯುತ್ತವೆ. ಫೆ.5ರಂದು ಬೆಳಗ್ಗೆ 10 ಗಂಟೆಗೆ ಅಖಿಲ ಭಾರತ ರಾಷ್ಟ್ರೀಯ ಮೀನುಗಾರರ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು,ಬಳಿಕ ಸಂಜೆ 4 ಗಂಟೆಗೆ ಕುಂದಾಪುರ, ಸಂಜೆ 6.30ಕ್ಕೆ ಭಟ್ಕಳಕ್ಕೆ ಜಾಥಾ ತಲುಪಲಿದೆ. ಫೆ.6ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಅಂಕೋಲ ದಾಟಿ ಕಾರವಾರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಭಾಪತಿ ತಿಳಿಸಿದರು.
ಸಿಎಂ ಜತೆ ದಿಗ್ಗಜರು ಭಾಗಿ: ಫೆ.3ರಂದು ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಸಿಎಂ, ಪರಮೇಶ್ವರ್ ಹಾಗೂ ಆಸ್ಕರ್ ಫರ್ನಾಂಡಿಸ್ ಅವರನ್ನು ಆಹ್ವಾನಿಸಿದ್ದೇವೆ. ಪ್ರತಿ ಕ್ಷೇತ್ರದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಒಬ್ಬೊಬ್ಬ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಮನೆ ಮನೆಗೆ ಮಾಹಿತಿ ಕೈಪಿಡಿ
ಸಿಎಂ ಸಿದ್ದರಾಮಯ್ಯ ಸರಕಾರದ ಸಾಧನೆಗಳು, ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತಿಳಿಸುವ ಮಾಹಿತಿ ಕೈಪಿಡಿಗಳನ್ನು ಮುದ್ರಿಸಲಾಗುತ್ತಿದ್ದು, ಶೀಘ್ರದಲ್ಲೇ ಅವುಗಳನ್ನು ಜನರಿಗೆ ತಲುಪಿಸಲಾಗುವುದು. ಈ ಮೂಲಕ ಕಾಂಗ್ರೆಸ್ ಮೀನುಗಾರ ಸಮಿತಿಯ ಪ್ರಚಾರವನ್ನು ಕರಾವಳಿಯಿಂದಲೇ ಆರಂಭಿಸು ತ್ತಿದ್ದೇವೆ ಎಂದು ಸಭಾಪತಿ ಹೇಳಿದರು.
ಪದಾಧಿಕಾರಿಗಳ ಆಯ್ಕೆ: ದ.ಕ. ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷರನ್ನಾಗಿ ದೀಪಕ್ ಕುಮಾರ್ ಬೊಕ್ಕಪಟ್ಣ, ಕೋಶಾಧಿಕಾರಿಯಾಗಿ ಮೋಹನ್ ಬೆಂಗ್ರೆ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ 14 ಮಂದಿ ಉಪಾಧ್ಯಕ್ಷರು, 15 ಪ್ರಧಾನ ಕಾರ್ಯದರ್ಶಿಗಳು, 5 ಮಂದಿ ಬ್ಲಾಕ್ ಅಧ್ಯಕ್ಷ ರನ್ನು ನೇಮಕ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ಮಮತಾ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್, ನಜೀರ್ ಬಜಾಲ್ ಮತ್ತಿತರರಿದ್ದರು.







