ಗಣರಾಜ್ಯೋತ್ಸವ ಆಚರಣೆ: ಮಾಣಿಕ್ ಷಾ ಮೈದಾನದಲ್ಲಿ ಸಕಲ ಸಿದ್ಧತೆ
.jpg)
ಬೆಂಗಳೂರು, ಜ.24: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಸಮಾರಂಭ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹೇಳಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದ ಸಕಲ ಸಿದ್ಧತೆ ಕುರಿತು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 11,500 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ನಿರ್ಮಾಣ, ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಧ್ವಜಾರೋಹಣ ಮಾಡುವ ಧ್ವಜಸ್ತಂಭವನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ಮೂರು ದಿನಗಳ ಕಾಲ ನಡೆಸಲಾಗುತ್ತಿದ್ದು, ಪಂಥಸಂಚಲನದಲ್ಲಿ ಪೊಲೀಸ್, ಸ್ಕೌಟ್ಸ್-ಗೈಡ್, ಎನ್‌ಸಿಸಿ, ಸೇವಾ ದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡಂತೆ ಕವಾಯತ್ ಮತ್ತು ಬ್ಯಾಂಡ್‌ನ ಒಟ್ಟು 30 ತುಕಡಿಗಳಲ್ಲಿ ಸುಮಾರು 20 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ಶಾಲಾ ಮಕ್ಕಳ ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 1,330 ಮಕ್ಕಳು ಭಾಗವಹಿಸಲಿದ್ದು, ಧ್ವಜಾರೋಹಣ ಸಂದರ್ಭದಲ್ಲಿ ಪುಷ್ಪವೃಷ್ಟಿ ಮಾಡಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಮುಂತಾದವರು ಉಪಸ್ಥಿತರಿದ್ದರು.







