ಮೋದಿಯ ಭಾರತೀಯ ಉಚ್ಚಾರಣೆಯನ್ನು ಅನುಕರಿಸುವ ಟ್ರಂಪ್!

ನ್ಯೂಯಾರ್ಕ್, ಜ. 24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇತರರನ್ನು ಅನುಕರಿಸುವುದು, ಅದರಲ್ಲೂ ಮುಖ್ಯವಾಗಿ ಇತರರ ಧ್ವನಿಯನ್ನು ಅನುಕರಿಸುವುದೆಂದರೆ ತುಂಬಾ ಇಷ್ಟ.
ಇತ್ತೀಚೆಗೆ ಅವರು ಪ್ರಧಾನಿ ನರೇಂದ್ರ ಮೋದಿಯ ಭಾರತೀಯ ಉಚ್ಚಾರಣೆಯನ್ನು ತಮಾಷೆಯಾಗಿ ಅನುಕರಿಸುತ್ತಿದ್ದಾರೆ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಟ್ರಂಪ್ ಮತ್ತು ಮೋದಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎನ್ನಲಾಗಿದೆ. ಇದರಿಂದಾಗಿಯೇ ಟ್ರಂಪ್ ಮೋದಿಯನ್ನು ಹಲವು ಬಾರಿ ತನ್ನ ಓವಲ್ ಕಚೇರಿಗೆ ಆಹ್ವಾನಿಸಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ಟ್ರಂಪ್ ಆಡಳಿತ ಮಾಡುತ್ತಿರುವ ವಾಗ್ದಾಳಿಗಳಲ್ಲೂ ಇದರ ಪರಿಣಾಮ ಇದೆ ಎನ್ನಲಾಗುತ್ತಿದೆ.
ಅದೇ ವೇಳೆ, ಅಫ್ಘಾನಿಸ್ತಾನಕ್ಕೆ ಸಂಬಂಧಿಸಿ ಮೋದಿ ನೀಡಿರುವ ಹೇಳಿಕೆಯನ್ನು ಟ್ರಂಪ್ ಅನುಕರಿಸುತ್ತಿದ್ದಾರೆ ಎಂದು ಪತ್ರಿಕಾ ವರದಿ ಹೇಳಿದೆ.
ಅಫ್ಘಾನಿಸ್ತಾನಕ್ಕೆ ಅಮೆರಿಕ ಇತ್ತೀಚೆಗೆ ಹೆಚ್ಚುವರಿ ಸೈನಿಕರನ್ನು ಕಳುಹಿಸಿರುವುದನ್ನು ಸ್ಮರಿಸಬಹುದಾಗಿದೆ. ಇದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ, ‘‘ಪ್ರತಿಫಲವಾಗಿ ಏನೂ ಸಿಗದ ದೇಶವೊಂದಕ್ಕೆ ಯಾವುದೇ ದೇಶ ಇಷ್ಟೊಂದು ಪ್ರಮಾಣದಲ್ಲಿ ಯಾವತ್ತೂ ಕೊಟ್ಟಿಲ್ಲ’’ ಎಂದು ಹೇಳಿದ್ದಾರೆನ್ನಲಾಗಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದಾಗಿ ಜಗತ್ತು ಭಾವಿಸುತ್ತಿದೆ ಹಾಗೂ ಪ್ರಧಾನಿ ಮೋದಿಯ ಮಾತುಗಳು ಅದಕ್ಕೆ ಸಾಕ್ಷಿಯಾಗಿವೆ ಎಂದು ಟ್ರಂಪ್ ಹೇಳುತ್ತಾರೆ. ಹೀಗೆ ಹೇಳುವಾಗಲೆಲ್ಲ ಅವರು ಮೋದಿಯ ಮಾತುಗಳನ್ನು ಅವರದೇ ಉಚ್ಚಾರಣೆಯಲ್ಲಿ ಅನುಕರಿಸುತ್ತಾರೆ ಎಂದು ಪತ್ರಿಕೆ ಹೇಳಿದೆ.







