ಮೈದಾನದಲ್ಲಿ ಬಿಗಿ ಬಂದೋಬಸ್ತ್: ಟಿ.ಸುನೀಲ್ ಕುಮಾರ್
ಗಣರಾಜ್ಯೋತ್ಸವ ದಿನಾಚರಣೆ

ಬೆಂಗಳೂರು, ಜ.24: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದ ಸಕಲ ಸಿದ್ಧತೆ ಕುರಿತು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದ ಎಲ್ಲ ವಿಭಾಗಗಳಿಂದ 9 ಡಿಸಿಪಿಗಳು, 6ಎಸಿಪಿ, 51 ಇನ್ಸ್‌ಪೆಕ್ಟರ್, 92 ಪಿಎಸ್ಸೈ, 16 ಮಹಿಳಾ ಪಿಎಸ್ಸೈ, 77 ಎಎಸ್ಸೈ, 535 ಪೇದೆಗಳು ಇರಲಿದ್ದಾರೆ ಎಮದು ತಿಳಿಸಿದರು.
ನಗರದ ಪ್ರಮುಖ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ನಿಗಾವಹಿಸಲಾಗುವುದು ಎಂದ ಅವರು, ಪಥಸಂಚಲನದಲ್ಲಿ 34 ತುಕಡಿಗಳು ಭಾಗವಹಿಸಲಿದ್ದು, ವಿಶೇಷವಾಗಿ ಗೋವಾ ರಾಜ್ಯದ ಸಶಸ್ತ್ರಪಡೆಯ ಒಂದು ತುಕಡಿ ಪಾಲ್ಗೊಳ್ಳಲಿದೆ ಎಂದು ಅವರು ಹೇಳಿದರು.
ಭದ್ರತೆ ದೃಷ್ಟಿಯಿಂದ ಮೈದಾನಕ್ಕೆ ಆಗಮಿಸುವ ಸಾರ್ವಜನಿಕರು ಸಿಗರೇಟ್, ತಿಂಡಿ-ತಿನಿಸು, ನೀರಿನ ಬಾಟಲ್‌ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಆಯುಕ್ತ ಟಿ.ಸುನೀಲ್‌ಕುಮಾರ್ ತಿಳಿಸಿದರು.







