ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬೆಳೆಸುವುದು ಸಮಾಜದ ಕರ್ತವ್ಯ: ನ್ಯಾ.ರಾಮಚಂದ್ರ ಹುದ್ದಾರ
ಧಾರವಾಡ, ಜ.23: ಇಂದಿನ ಸಮಾಜದಲ್ಲಿ ಸುಧಾರಿತ ಸೌಲಭ್ಯಗಳು ಮತ್ತು ಮುಂದುವರಿದ ತಂತ್ರಜ್ಞಾನದ ಭಾಗವಾಗಿ ಯುವ ಸಮುದಾಯ ಅವುಗಳಿಂದ ಸಿಗುವ ಅನುಕೂಲತೆಗಳನ್ನು ಬಳಸಿಕೊಂಡು, ಸಮಾಜಕ್ಕೆ ಉಪಕಾರಿಯಾಗುವುದು ಬಿಟ್ಟು, ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ. ಇಂದಿನ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಉಳಿಸಿ, ಬೆಳೆಸುವುದು ಪಾಲಕರೊಂದಿಗೆ ಸಮಾಜದ ಕರ್ತವ್ಯವೂ ಆಗಿದೆ ಎಂದು ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಹೇಳಿದ್ದಾರೆ.
ಬುಧವಾರ ನಗರದ ಮಲ್ಲಸಜ್ಜನ ವ್ಯಾಯಾಮ ಪ್ರೌಢಶಾಲೆ ಸಭಾಂಗಣದಲ್ಲಿ ಕೇಂದ್ರ ಸರಕಾರದ ಬಿಡಿಎಸ್‌ಎಸ್ ಸಂಸ್ಥೆ, ಮಕ್ಕಳ ಸಹಾಯವಾಣಿ-1098, ಸಿಐಎಫ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಸಹಾಯವಾಣಿ, ಮಾದಕ ವಸ್ತುಗಳ ವಿರೋಧಿ ಜನಜಾಗೃತಿ ಜಾಥಾ ಹಾಗೂ ತೆರೆದ ಮನೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳು ನ್ಯಾಕೋಟಿಕ್ ಡ್ರಗ್ಸ್ ಹಾಗೂ ಗಾಂಜಾಗಳಿಗೆ ಹೇಗೆ ಬಲಿಯಾಗುತ್ತಿದ್ದಾರೆ. ಮತ್ತು ಅಂತಹ ಮಾದಕ ವಸ್ತುಗಳಿಗೆ ಹೇಗೆ ದಾಸರಾಗುತ್ತಿದ್ದಾರೆ ಎಂಬುದರ ಕಡೆ ಗಮನಹರಿಸಿ, ಅದರಿಂದ ದೂರವಿರುವಂತೆ ಮಕ್ಕಳನ್ನು ಎಚ್ಚರಿಸಬೇಕು ಎಂದು ರಾಮಚಂದ್ರ ಹುದ್ದಾರ ಹೇಳಿದರು.
ಮಕ್ಕಳು ಮೊಬೈಲ್ ಪೋನ್‌ಗಳ ಗೀಳಿನಿಂದಾಗಿ ವಿದ್ಯಾಭ್ಯಾಸ ಕಡಿಮೆ ಮಾಡುತ್ತಿದ್ದಾರೆ. ಈ ಕುರಿತು ಪಾಲಕರೊಂದಿಗೆ ಸಮಾಜದ ಪ್ರತಿಯೊಬ್ಬರು ಕಾಳಜಿ ವಹಿಸಬೇಕಿದೆ. ಎಲ್ಲಾ ಮಕ್ಕಳು ಮಾದಕ ವಸ್ತುಗಳಿಂದ ದೂರವಿರುವಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಬೇಕಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಚ್.ನಾಗೂರ ಮಾತನಾಡಿ, ಮಕ್ಕಳು ತಮ್ಮ ಬದುಕಿನ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಮತ್ತು ಮಕ್ಕಳು ತಮ್ಮ ಬದುಕು ಬಂಗಾರದ ಹೆಜ್ಜೆಯಂತೆ ಮಾಡಿಕೊಳ್ಳಬೇಕು ಹಾಗೂ ದುಶ್ಚಟಗಳಿಗೆ ಬಲಿಯಾಗಬಾರದೆಂದು ತಿಳಿಸಿದರು.
ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಸೋಮಶೇಖರ ಬಿಜ್ಜಳ ಮಕ್ಕಳಿಗೆ ಮಾದಕ ವಸ್ತುಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಮಕ್ಕಳಿಗೆ ಚಿತ್ರಗಳ ತೋರಿಸುವ ಮೂಲಕ ಮಾದಕ ವಸ್ತುಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಪ್ರಾಂತಿಯ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಫಾದರ್ ಜೇಕಬ್ ಅಂಥೋನಿ ಮಾತನಾಡಿ, ಧಾರವಾಡ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಣ್ಣ ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ ವರದಿಯಾಗುತ್ತಿವೆ. ನಮ್ಮ ಸಂಸ್ಥೆಯಿಂದ ಮಕ್ಕಳಲ್ಲಿ ಜಾಗೃತಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮಕ್ಕಳ ಸಹಾಯವಾಣಿ ಮೂಲಕ ಧಾರವಾಡ ಮತ್ತು ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಭಾಗದಿಂದ ಕಳೆದ ಒಂದು ವರ್ಷದಲ್ಲಿ 2072ಕ್ಕೂ ಹೆಚ್ಚು ತೊಂದರೆಗೆ ಒಳಗಾದ ಮಕ್ಕಳ ಕರೆ ಸ್ವಿಕರಿಸಿ, ರಕ್ಷಣೆಗೆ ಕ್ರಮಕೈಗೊಂಡಿದ್ದೆವೆ. 50ಕ್ಕೂ ಹೆಚ್ಚು ತೆರೆದ ಮನೆ ಕಾರ್ಯಕ್ರಮದ ಮೂಲಕ ವಿವಿಧ ಶಾಲೆಗಳ ಮಕ್ಕಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ, ಮಹಾನಗರ ಪಾಲಿಕೆ ಸದಸ್ಯೆ ಬೀಬೀಫಾತೀಮಾ ಎಂ.ಪಠಾಣ್, ಜಿಲ್ಲಾ ಆರೋಗ್ಯಾಧಿಕಾರಿ ಆರ್.ಎಂ.ದೊಡ್ಡಮನಿ, ಕ್ಷೇತ್ರ ಶಿಕ್ಷಣಧಿಕಾರಿ ಎ.ಎ.ಖಾಜಿ, ಆನಂದ ನಾಡಗೇರ, ಬಸವರಾಜ ಎಸ್.ಮಯಾಚಾರ್ಯ, ಭೀಮಪ್ಪ ತಳ್ಳಗೇರಿ, ಮಲ್ಲಪ್ಪಇರಸನ್ನವರ, ಚಂದ್ರಶೇಖರ ರಾಹೂತರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







