ಪಾಂಪೆ ರೋಗಿಗಳ ಚಿಕಿತ್ಸೆಗೆ ಹಣ ಬಿಡುಗಡೆ ಮಾಡಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಜ.24: ವಂಶವಾಹಿಗಳಲ್ಲಿನ ದೋಷ ಮತ್ತು ಅಲ್ಫಾ ಆ್ಯಸಿಡ್ ಗ್ಲುಕೊಸೈರಿಸ್ ಪ್ರೊಟೀನ್ ಕೊರತೆ ಹಿನ್ನೆಲೆಯಲ್ಲಿ ಪಾಂಪೆ(ಗ್ಲೈಕೋಜೆನ್ ಸ್ಟೋರೇಜ್ಡ್ ಡಿಸೀಸ್) ರೋಗಕ್ಕೆ ತುತ್ತಾಗಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ 6.64 ಕೋಟಿ ರೂ.ಹಣ ಬಿಡುಗಡೆ ಮಾಡಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು.
ಚಿಕ್ಕಬಳ್ಳಾಪುರ ಜಿಲ್ಲೆಯ ಸತ್ಯನಾರಾಯಣರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಕೇಸ್ತೂರು ಎನ್.ಚಂದ್ರಶೇಖರ್ ಅವರು, ಪಾಂಪೆ ರೋಗಕ್ಕೆ ತುತ್ತಾಗಿರುವ ರಾಘವೇಂದ್ರ(24)ಗೆ ಚಿಕಿತ್ಸೆ ನೀಡಬೇಕೆಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ನ್ಯಾಯಪೀಠವು ಮಧ್ಯಂತರ ಆದೇಶವನ್ನು ನೀಡಿದ್ದರೂ ಚಿಕಿತ್ಸೆ ನೀಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಪರ ವಾದಿಸಿದ ವಕೀಲರು, ಪಾಂಪೆ ರೋಗಕ್ಕೆ ತುತ್ತಾಗಿರುವ ರಾಘವೇಂದ್ರ ಅವರು 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಹೀಗಾಗಿ, ಅವರಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆದೇಶಿಸಬೇಕು. ಹಾಗೂ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಪಾಂಪೆ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಇನ್ನು ಸರಕಾರ 4.14 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಹಾಗೂ ರಾಘವೇಂದ್ರಗೂ ಚಿಕಿತ್ಸೆ ನೀಡಬೇಕಾದರೆ ಒಟ್ಟು 6.64 ಕೋಟಿ ರೂ.ಸರಕಾರ ಬಿಡಗಡೆ ಮಾಡಬೇಕಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಘವೇಂದ್ರ ಸೇರಿ ಇತರ 15 ಮಕ್ಕಳಿಗೂ ಚಿಕಿತ್ಸೆ ನೀಡಲು ರಾಜ್ಯ ಸರಕಾರ 6.64 ಕೋಟಿ ರೂ.ಹಣ ಬಿಡುಗಡೆ ಮಾಡಬೇಕು. ಈ ಮೊದಲು ರಾಘವೇಂದ್ರಗೆ ಚಿಕಿತ್ಸೆ ನೀಡಲು ನೀಡಿದ್ದ ಮಧ್ಯಂತರ ಆದೇಶವನ್ನು ಯಾವುದೆ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು.







