ದ್ರಾವಿಡ್ ದಾಖಲೆ ಮುರಿದ ಪೂಜಾರ

ಜೋಹಾನ್ಸ್ ಬರ್ಗ್, ಜ.24: ಇಲ್ಲಿ ಬುಧವಾರ ಆರಂಭಗೊಂಡ ದಕ್ಷಿಣ ಆಫ್ರಿಕ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದಾಗ ತಂಡವನ್ನು ಆಧರಿಸಿದ ಮಧ್ಯಮ ಸರದಿಯ ದಾಂಡಿಗ ಚೇತೇಶ್ವರ ಪೂಜಾರ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿ ಮಹಾನ್ ಗೋಡೆ ಖ್ಯಾತಿಯ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದಿದ್ದಾರೆ.
ದಕ್ಷಿಣ ಆಫ್ರಿಕದ ವೇಗದ ಬೌಲರ್‌ಗಳ ದಾಳಿಯನ್ನು ಎದುರಿಸಲಾರದೆ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಮತ್ತು ಮುರಳಿ ವಿಜಯ್ ಬೇಗನೇ ನಿರ್ಗಮಿಸಿದಾಗ ಚೇತೇಶ್ವರ ಪೂಜಾರ ತಂಡವನ್ನು ಆಧರಿಸಿದರು. ನಾಯಕ ವಿರಾಟ್ ಕೊಹ್ಲಿಗೆ ಉತ್ತಮ ಬೆಂಬಲ ನೀಡಿದರು.
ಎರಡನೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲೂ ಖಾತೆ ತೆರೆಯದೆ ರನೌಟಾಗಿದ್ದ ಪೂಜಾರ ಇಂದು ಖಾತೆ ತೆರೆಯಲು 54 ಎಸೆತಗಳನ್ನು ಎದುರಿಸಿದರು. ಇದರೊಂದಿಗೆ ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದರು. 21.3ನೇ ಓವರ್‌ನಲ್ಲಿ ಲುಂಗಿಸಾನಿ ಗಿಡಿ ಎಸೆತದಲ್ಲಿ 1 ರನ್ಳಿಸುವ ಮೂಲಕ ಖಾತೆ ತೆರೆದರು.
ರಾಹುಲ್ ದ್ರಾವಿಡ್ ಅವರು 2007ರಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ 1 ರನ್ ಗಳಿಸಲು 41 ಎಸೆತಗಳನ್ನು ಎದುರಿಸಿದ್ದರು.
1 ರನ್ ಗಳಿಸಲು ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತದ ದಾಂಡಿಗರ ವಿವರ ಇಂತಿವೆ.
ಆಟಗಾರರು ಎಸೆತಗಳು ಎದುರಾಳಿ ತಂಡ ವರ್ಷ
ರಾಜೇಶ್ ಚೌಹಾನ್ 57 ಶ್ರೀಲಂಕಾ 1994
ಚೇತೇಶ್ವರ ಪೂಜಾರ 54 ದ.ಆಫ್ರಿಕ 2018
ಎಸ್.ತೆಂಡುಲ್ಕರ್ 45 ಝಿಂಬಾಬ್ವೆ 2002
ಆರ್.ದ್ರಾವಿಡ್ 41 ಆಸ್ಟ್ರೇಲಿಯ 2007
ಇರ್ಫಾನ್ ಪಠಾಣ್ 29 ಪಾಕಿಸ್ತಾನ 2005
ಸುರೇಶ್ ರೈನಾ 29 ಇಂಗ್ಲೆಂಡ್ 2011







