ಉದ್ಯೋಗ ಸೃಷ್ಟಿಗೆ ಆದ್ಯತೆ: ಆರ್.ವಿ.ದೇಶಪಾಂಡೆ

ಬೆಂಗಳೂರು, ಜ.24: ಯುವಜನರಿಗೆ ಉದ್ಯೋಗ ಸೃಷ್ಟಿಸುವ ಆದ್ಯತೆ ನೀಡುವ ಜೊತೆಗೆ ಕರ್ನಾಟಕವನ್ನು ಉದ್ಯೋಗ ರಾಜ್ಯವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಕೈಗಾರಿಕ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಬುಧವಾರ ನಗರದ ಅರಮನೆ ಮೈದಾನದಲ್ಲಿ ‘ಇಂಡಿಯಾ ಸಾಫ್ಟ್-2018’ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಕೇವಲ ಭಾರತದ ಸಿಲಿಕಾನ್ ವ್ಯಾಲಿಯಾಗಿ ಮಾತ್ರ ಉಳಿದುಕೊಂಡಿಲ್ಲ. ಬದಲಿಗೆ, ಇದು ಈಗ ಇಡೀ ಜಗತ್ತಿನ ಸಿಲಿಕಾನ್ ಕಣಿವೆಯಾಗಿ ಬೆಳೆದಿದೆ. ಉದ್ದಿಮೆಗಳ ಸ್ಥಾಪನೆ ಮತ್ತು ಇದಕ್ಕೆ ಸಂಬಂಧಿಸಿದ ನೀತಿ ನಿರೂಪಣೆಯಲ್ಲಿ ರಾಜ್ಯವು ಉಳಿದೆಲ್ಲ ರಾಜ್ಯಗಳಿಗಿಂತ ಮುಂದಿದೆ ಎಂದರು.
ಪ್ರವರ್ಧಮಾನಕ್ಕೆ ಬರುತ್ತಿರುವ ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಭಾರತೀಯ ಕಂಪೆನಿಗಳಿಗೆ ಉಜ್ವಲ ಭವಿಷ್ಯವಿದೆ. ನಮ್ಮಲ್ಲಿರುವ ಮಾನವ ಸಂಪನ್ಮೂಲವೇ ನಮ್ಮ ಶಕ್ತಿಯಾಗಿದೆ. ನಮ್ಮಲ್ಲಿರುವಷ್ಟು ಕೌಶಲ್ಯ ಪೂರ್ಣ ಮಾನವಶಕ್ತಿ, ಪ್ರತಿಭೆ ಅಮೆರಿಕದಲ್ಲಿ ಕೂಡ ಇಲ್ಲ ಎನ್ನುವುದನ್ನು ಉದ್ಯಮಿಗಳು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಉದ್ದಿಮೆಗಳು ಬೆಳೆಯಬೇಕಾದರೆ ಸಂಶೋಧನೆ ಅತ್ಯಂತ ಮುಖ್ಯ. ಇಂದು ಬೆಂಗಳೂರು ಐಟಿ-ಬಿಟಿ ಉದ್ದಿಮೆಗಳ ಜೊತೆಗೆ ಸಂಶೋಧನೆಯ ರಾಜಧಾನಿಯೂ ಆಗಿದೆ. ನಮ್ಮಲ್ಲಿ ಪ್ರಸಿದ್ಧಿ ಪಡೆದ 400ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು ನೆಲೆಯೂರಿವೆ. ಇಲ್ಲಿ ಬಂಡವಾಳ ಹೂಡಲು ಬರುವವರಿಗೆಲ್ಲ ಸಮರ್ಪಕ ಮೂಲಸೌಲಭ್ಯ ಒದಗಿಸಲು ಸರಕಾರ ಮುಕ್ತ ಮನಸ್ಸನ್ನು ಹೊಂದಿದೆ ಎಂದು ತಿಳಿಸಿದೆ.
ಉದ್ಯಮಿಗಳು ಹೂಡಿಕೆ ಮಾಡುವ ಮೊದಲು ತಮ್ಮತಮ್ಮಲ್ಲೇ ರಚನಾತ್ಮಕವಾಗಿ ಚರ್ಚಿಸಬೇಕು. ನೀವು ರಾಜ್ಯದಲ್ಲಿ ಹೂಡಿಕೆ ಮಾಡಲು ಒಳ್ಳೆಯ ವಾತಾವರಣದೆ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರ ಸಿದ್ಧವಾಗಿದೆ ಎಂದು ಭರವಸೆ ನೀಡಿದರು.
ಮೂಲಸೌಲಭ್ಯಗಳಿಗೆ ಸಂಬಂಧಿಸಿದಂತೆ ರಾಜ್ಯವು 1996 ರಷ್ಟು ಹಿಂದೆಯೇ ಸ್ಪಷ್ಟ ನೀತಿ ಜಾರಿಗೆ ತಂದಿತು. ಐಟಿ-ಬಿಟಿ, ನವೋದ್ಯಮಗಳು, ವಿದ್ಯುತ್ ಚಾಲಿತ ವಾಹನಗಳು ಹೀಗೆ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯವು ದೇಶದಲ್ಲೇ ಮೊದಲ ಬಾರಿಗೆ ಅತ್ಯಂತ ಪಾರದರ್ಶಕ ನೀತಿಗಳನ್ನು ರೂಪಿಸಿರುವ ಹೆಗ್ಗಳಿಕೆ ಹೊಂದಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಬೆಂಗಳೂರಿನ ಜತೆಗೆ ಕಲಬುರಗಿ, ಶಿವಮೊಗ್ಗ, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮುಂತಾದೆಡೆಗಳಲ್ಲೂ ಉದ್ದಿಮೆಗಳನ್ನು ಸ್ಥಾಪಿಸಲು ತಕ್ಕ ವಾತಾವರಣವಿದೆ. ಉದ್ದಿಮೆಗಳಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ವೈಮಾನಿಕ ಸಂಪರ್ಕ ವಲಯವನ್ನು ಸುಧಾರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕಾ ಸಚಿವೆ ಡಾ.ಗೀತಾ ಮಹದೇವಪ್ರಸಾದ್, ಇಎಸ್‌ಸಿ ಅಧ್ಯಕ್ಷ ಪ್ರಸಾದ್ ಗರಪತಿ, ಇಂಡಿಯಾ ಸಾಫ್ಟ್‌ನ ಅಧ್ಯಕ್ಷ ನಳಿನ್ ಕೊಹ್ಲಿ, ಇಎಸ್‌ಸಿ ಉಪಾಧ್ಯಕ್ಷ ಸೇಥಿಯಾ, ರಾಜ್ಯ ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಇಎಸ್‌ಸಿ ಕಾರ್ಯ ನಿರ್ವಾಹಕ ನಿರ್ದೇಶಕ ಡಿ.ಕೆ.ಸರೀನ್ ಸೇರಿ ಪ್ರಮುಖರಿದ್ದರು. ಎರಡು ದಿನಗಳ ಈ ಮೇಳದಲ್ಲಿ 400ಕ್ಕೂ ಹೆಚ್ಚು ಮಳಿಗೆಗಳಿದ್ದು, 60ಕ್ಕೂ ಹೆಚ್ಚು ದೇಶಗಳ ಉದ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು.







