ಡಿಸಿಯಿಂದ ದೇವಾಲಯಕ್ಕೆ ಕಾರ್ಣಿಕರ ನೇಮಕ: ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು, ಜ.24: ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ಮೈಲಾರದ ಮೈಲಾರಲಿಂಗ ದೇವಾಲಯಕ್ಕೆ ಕಾರ್ಣಿಕರನ್ನು ನೇಮಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ದೇವಾಲಯದ ಮುಖ್ಯ ಅರ್ಚಕ ಹಾಗೂ ಟ್ರಸ್ಟಿ ಗುರುವೆಂಕಪ್ಪಯ್ಯ ಒಡೆಯರ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕ ಸದಸ್ಯ ಪೀಠ, ಜಿಲ್ಲಾಧಿಕಾರಿಯ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಅರ್ಜಿ ಕುರಿತು ರಾಜ್ಯ ಸರಕಾರ ಮತ್ತು ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿತು.
ಪ್ರತಿವರ್ಷ ದೇವಾಲಯದಲ್ಲಿ ಕಾರ್ಣಿಕೋತ್ಸವ ನಡೆಯಲಿದೆ. ಈ ವೇಳೆ ಕಾರ್ಣಿಕ ಗೊರವಯ್ಯ ದೇವಾಲಯದ ಮುಂಭಾಗದ ಕಂಬವನ್ನೇರಿ ಭವಿಷ್ಯ ನುಡಿಯುತ್ತಾರೆ. ಅದರಂತೆ ಇದೇ ಫೆ.3ರಂದು ಕಾರ್ಣಿಕೋತ್ಸವ ನಡೆಯಲಿದ್ದು, ರಾಮಣ್ಣ ಎಂಬವರನ್ನು ಕಾರ್ಣಿಕರಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾರ್ಣಿಕರನ್ನು ನೇಮಿಸುವ ಅಧಿಕಾರ ದೇವಾಲಯದ ಮುಖ್ಯ ಅರ್ಚಕರು ಮಾತ್ರ ಹೊಂದಿದ್ದಾರೆ. ಆದರೆ, ಜಿಲ್ಲಾಧಿಕಾರಿಯು ಕಾರ್ಣಿಕರನ್ನು ನೇಮಿಸುವ ಮುನ್ನ ಮುಖ್ಯ ಅರ್ಚಕರನ್ನು ಸಂಪರ್ಕಿಸಿಲ್ಲ. ಆದ್ದರಿಂದ ಇದೇ ಫೆ.3ರಂದು ನಡೆಯಲಿರುವ ಕಾರ್ಣಿಕೋತ್ಸವದಲ್ಲಿ ಗುರುಗಳ ಸೂಚಿಸಿದ ವ್ಯಕ್ತಿಯನ್ನು ಕಾರ್ಣಿಕರಾಗಿ ನೇಮಿಸಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯಕ್ಕೆ ಕೋರಿದರು.
ಆದರೆ, ಈ ವಾದ ಒಪ್ಪದ ನ್ಯಾಯಪೀಠ, ಅರ್ಜಿ ಕುರಿತು ಮೊದಲು ಸರಕಾರದ ಉತ್ತರ ಸಲ್ಲಿಸಲಿ. ನಂತರ ನಿಮ್ಮ ಮನವಿಯ ಕುರಿತು ಪರಿಶೀಲಿಸೋಣ ಎಂದು ತಿಳಿಸಿ ವಿಚಾರಣೆ ಮುಂದೂಡಿತು.







