ಜ. 26: ಎಸ್ಕೆಎಸ್ಸೆಸ್ಸೆಫ್ ನಿಂದ ಗುರುಪುರ ಕೈ ಕಂಬದಲ್ಲಿ ಮಾನವ ಸರಪಳಿ ಜಾಥ

ಮಂಗಳೂರು, ಜ. 24: ಭಾರತದ ಗಣರಾಜ್ಯ ದಿನದಂದು ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಗುರುಪುರ ಕೈ ಕಂಬದಲ್ಲಿ ಸೌರ್ಹಾದತೆಯ ಸಂಕಲ್ಪದೊಂದಿಗೆ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ಧಿಕ್ ಅಬ್ದುಲ್ ಖಾದರ್ ಸುದ್ದಿ ಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
1990ರ ನಂತರ ದೇಶಾದ್ಯಂತ ಉಂಟಾದ ಮತೀಯ ಸಂಘರ್ಷದ ಹಿನ್ನೆಲೆಯಲ್ಲಿ ಮತ್ತೆ ಸಮಾಜದಲ್ಲಿ ಸೌರ್ಹಾದತೆಯ ವಾತಾವರಣ ಮೂಡಿಸಲು ದೇಶದ ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ, ಸಮಾನತೆ, ಸಹೊದರತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಮುಸ್ಲಿಂ ಸಮುದಾಯದ ಆಶಾ ಕೇಂದ್ರವಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಾಮಾ ಆಶೀರ್ವಾದದೊಂದಿಗೆ ಸಮಾಜದಲ್ಲಿ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ಕೇರಳದ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ವತಿಯಿಂದ ದೇಶಾದ್ಯಂತ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದರ ಅಂಗವಾಗಿ ಜಿಲ್ಲಾ ಕೇಂದ್ರಗಳಲ್ಲಿ ದೇಶ ರಕ್ಷಣೆಯ ಪ್ರತಿಜ್ಞೆ ಬೋಧಿಸುವ, ರಾಷ್ಟ್ರ ರಕ್ಷಣೆಯ ಸಂಕಲ್ಪದೊಂದಿಗೆ ಕಾರ್ಯಕ್ರಮವನ್ನು ದೇಶದ 36 ಕಡೆಗಳಲ್ಲಿ ಹಾಗೂ ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಅನಿವಾಸಿ ಭಾರತೀಯರು ಇರುವ 36 ಕಡೆಗಳಲ್ಲಿ ಸೇರಿದಂತೆ ಒಟ್ಟು 72 ಕಡೆಗಳಲ್ಲಿ ಸಂಘಟನೆಯ ವತಿಯಿಂದ ಜ. 26ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಿದ್ದಿಕ್ ಅಬ್ದುಲ್ ಖಾದರ್ ತಿಳಿಸಿದ್ದಾರೆ.
ಮಾನವ ಸರಪಳಿ ಕಾರ್ಯಕ್ರಮ-ಜಾಥ:- ಜನವರಿ 26ರಂದು ಬೆಳಗ್ಗೆ 9ಗಂಟೆಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ ಧ್ವಜಾರೋಹಣ ನಿರ್ವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕೈ ಕಂಬದಿಂದ ಜಾಥಾ ಪ್ರಾರಂಭವಾಗಲಿದೆ. ಅಲ್‌ಹಾಜ್ ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್ ಅತ್ರಾಡಿ ಖಾಝಿ ಜಾಥವನ್ನು ಉದ್ಘಾಟಿಸಲಿದ್ದಾರೆ. 10 ಸಾವಿರ ಮಂದಿ ಮಾನವ ಸರಪಳಿಯಲ್ಲಿ ದಪ್ಪು ತಂಡ ಭಾಗವಹಿಸಲಿದೆ. ಸಂಜೆ 4 ಗಂಟೆಗೆ ಪೊಳಲಿ ದ್ವಾರದ ಬಳಿಯ ಭಾಮಿ ಶಾಲೆಯ ಪಕ್ಕದ ಮೈದಾನದಲ್ಲಿ ಮಾನವ ಸರಪಳಿ ಜಾಥದ ಸಮಾರೋಪ ಸಮಾರಂಭ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಅಧ್ಯಕ್ಷತೆ ವಹಿಸಿಲಿದ್ದಾರೆ. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವ, ಐವನ್ ಡಿ ಸೋಜ,ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹೀಂ,ಗೌರವ ಅತಿಥಿಗಳಾಗಿ ಈಶ ವಿಠಲ ದಾಸ ಸ್ವಾಮೀಜಿ ಕೇಮಾರು ಮಠ,ಪೊಂಪೈ ಚರ್ಚ್ ಕೈಕಂಬ ಸಾನಿಧ್ಯ ದ ಧರ್ಮಗುರು ವಂ.ಲೋಬೊ ಬಜಪೆ ಠಾಣೆಯ ವೃತ್ತ ನಿರೀಕ್ಷಕ ಪರಶಿವ ಮೂರ್ತಿ ಹಾಗೂ ಸಮಸ್ತ ಉಲಾಮ ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಇಸ್ಹಾಕ್ ಪೈಝಿ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಶೌಕತ್ತಲಿ ವೌಲವಿ ವೆಳ್ಳಮುಂಡ ಕೇರಳ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಭಾಗವಹಿಸಲಿದ್ದರೆ ಎಂದು ಅಬ್ದುಲ್ ಖಾದರ್ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಎಸ್ಕೆಎಸ್ಸೆಸ್ಸೆಫ್ನ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಖಾಸಿಂ ದಾರಿಮಿ,ಅಬ್ದುಲ್ ಮಜೀದ್ ಸೂರಲ್ಪಾಡಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಾಮಾನಿ, ಮಾನವ ಸರಪಳಿ ಸ್ವಾಗತ ಸಮಿತಿಯ ಅಧ್ಯಕ್ಷ ರಿಯಾಝ್ ಮಿಲನ್, ಕೋಶಾಧಿಕಾರಿ ಅಬ್ದುಲ್ ಜಲೀಲ್ ಬದ್ರಿಯಾ, ಮದ್ರಸ ಮ್ಯಾನೇಜ್ ಮೆಂಟ್ ಗುರುಪುರದ ಅಧ್ಯಕ್ಷ ನೌಶಾದ್ ಹಾಜಿ, ಉಸ್ಮಾನ್ ಹಾಜಿ, ಮೆಟ್ರೋಶಾಹುಲ್ ಹಮೀದ್, ಹಾರೀಶ್ ಕೆ, ಅಬ್ದುಲ್ ಮಜೀದ್ ದಾರಿಮಿ, ಎಚ್.ಎಂ.ಮೊದೀನ್ ಹಾಜಿ, ಆರೀಫ್ ಬಡಕ ಬೈಲು ಎಚ್.ಎ.ಮುಹಮ್ಮದ್ ಕುಂಞ ಮಾಸ್ಟರ್, ಶಾಕಿರ್ ಮಳಲಿ, ಹಂಝ ಮಿಶ್ರಿಯಾ , ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.







