ಶಾಸ್ತ್ರಿಯವರು ಆರೆಸ್ಸೆಸ್ ದ್ವೇಷಿಯಾಗಿರಲಿಲ್ಲ:ಆಡ್ವಾಣಿ

ಹೊಸದಿಲ್ಲಿ,ಜ.24: ಲಾಲ್ ಬಹದ್ದೂರ್ ಶಾಸ್ತ್ರಿಯವರು ಜವಾಹರಲಾಲ್ ನೆಹರು ಅವರಂತೆ ಸೈದ್ಧಾಂತಿಕವಾಗಿ ಆರೆಸ್ಸೆಸ್‌ಗೆ ವಿರೋಧಿಯಾಗಿರಲಿಲ್ಲ ಮತ್ತು ಅವರು ಪ್ರಧಾನಿಯಾಗಿದ್ದಾಗ ಸಮಾಲೋಚನೆಗಳಿಗಾಗಿ ಆಗಾಗ್ಗೆ ಆರೆಸ್ಸೆಸ್‌ನ ಮುಖ್ಯಸ್ಥ ಗೊಲ್ವಾಳ್ಕರ್ ಅವರನ್ನು ಆಹ್ವಾನಿಸುತ್ತಿದ್ದರು ಎಂದು ಹಿರಿಯ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರು ಹೇಳಿದ್ದಾರೆ.
ಆರೆಸ್ಸಸ್ ಮುಖವಾಣಿ ಆರ್ಗನೈಸರ್ ಸಾಪ್ತಾಹಿಕದ ವಾರ್ಷಿಕ ವಿಶೇಷಾಂಕದ ಲೇಖನದಲ್ಲಿ ಶಾಸ್ತ್ರಿಯವರನ್ನು ‘ಅರ್ಪಣಾ ಮನೋಭಾವದ ಕಾಂಗ್ರೆಸಿಗ’ ಎಂದು ಬಣ್ಣಿಸಿರುವ ಅವರು, ತನ್ನ ವೈಯಕ್ತಿಕ ಗುಣಗಳಿಂದಾಗಿ ಅವರು ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದಿದ್ದಾರೆ.
ಆರ್ಗನೈಸರ್ ಸಾಪ್ತಾಹಿಕದ ಪ್ರತಿನಿಧಿಯಾಗಿ ತಾನು ಹಲವಾರು ಬಾರಿ ಶಾಸ್ತ್ರಿಯವರನ್ನು ಭೇಟಿಯಾಗಿದ್ದೆ ಮತ್ತು ಪ್ರತಿ ಬಾರಿಯೂ ಈ ಕುಳ್ಳು ವ್ಯಕ್ತಿತ್ವದ ಆದರೆ ವಿಶಾಲ ಹೃದಯಿ ಪ್ರಧಾನಿ ತನ್ನ ಮೇಲೆ ಧನಾತ್ಮಕ ಪ್ರಭಾವವನ್ನು ಉಂಟು ಮಾಡುತ್ತಿದ್ದರು ಎಂದು ಅವರು ಶ್ಲಾಘಿಸಿದ್ದಾರೆ. ಆಡ್ವಾಣಿ 1960ರಲ್ಲಿ ಸಹಾಯಕ ಸಂಪಾದಕರಾಗಿ ಆರ್ಗನೈಸರ್‌ಗೆ ಸೇರಿದ್ದರು.