ಕೇಂದ್ರದಿಂದ 20 ಸಾರ್ವಜನಿಕ ಬ್ಯಾಂಕ್ ಗಳಿಗೆ 88,139 ಕೋ.ರೂ ನೆರವು
ಮರುಬಂಡವಾಳೀಕರಣ ಯೋಜನೆ

ಹೊಸದಿಲ್ಲಿ,ಜ.24: ಹೆಚ್ಚುತ್ತಿರುವ ಕೆಟ್ಟ ಸಾಲಗಳಿಂದ ನಲುಗುತ್ತಿರುವ 20 ಸಾರ್ವಜನಿಕ ಕ್ಷೇತ್ರದ ಬ್ಯಾಂಕು(ಪಿಎಸ್‌ಬಿ)ಗಳಿಗೆ ಹಾಲಿ ಆರ್ಥಿಕ ವರ್ಷದಲ್ಲಿ 88,139 ಕೋ.ರೂ.ಗಳ ಬಂಡವಾಳವನ್ನು ಒದಗಿಸುವುದಾಗಿ ಸರಕಾರವು ಬುಧವಾರ ಪ್ರಕಟಿಸಿದ್ದು, ಐಡಿಬಿಐ ಬ್ಯಾಂಕ್ 10,610 ಕೋ.ರೂ.ಗಳ ಅತ್ಯಂತ ಹೆಚ್ಚಿನ ಮೊತ್ತವನ್ನು ಪಡೆಯಲಿದೆ.
ತನ್ನ ಸಚಿವಾಲಯವು ವಿವರವಾದ ಪರಿಶೀಲನೆಯ ಬಳಿಕ ಪಿಎಸ್‌ಬಿಗಳಿಗೆ ನೀಡುವ ಮೊತ್ತವನ್ನು ನಿಗದಿಗೊಳಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರಕಾರವು ಕಳೆದ ವರ್ಷ 2.1 ಲ.ಕೋ.ರೂ.ಗಳ ಬ್ಯಾಂಕ್ ಮರುಬಂಡವಾಳೀಕರಣ ಯೋಜನೆಯನ್ನು ಪ್ರಕಟಿಸಿದ್ದು, 2017-18 ಮತ್ತು 2018-19ನೇ ಆರ್ಥಿಕ ವರ್ಷಗಳಲ್ಲಿ ಈ ಹಣ ಹಂಚಿಕೆಯಾಗಲಿದೆ.
ಮಾ.31ಕ್ಕೆ ಅಂತ್ಯಗೊಳ್ಳುವ ಹಾಲಿ ಹಣಕಾಸು ವರ್ಷದಲ್ಲಿ ಎಸ್‌ಬಿಐ 8,800 ಕೋ.ರೂ., ಬ್ಯಾಂಕ್ ಆಫ್ ಇಂಡಿಯಾ 9,232 ಕೋ.ರೂ., ಯುಕೋ ಬ್ಯಾಂಕ್ 6,507 ಕೋ.ರೂ., ಪಂಜಾಬ್ ನ್ಯಾಷನಲ್ ಬ್ಯಾಂಕ್ 5,473 ಕೋ.ರೂ., ಬ್ಯಾಂಕ್ ಆಫ್ ಬರೋಡಾ 5,375 ಕೋ.ರೂ., ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 5,158 ಕೋ.ರೂ., ಕೆನರಾ ಬ್ಯಾಂಕ್ 4,865 ಕೋ.ರೂ., ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 4,694 ಕೋ.ರೂ., ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 4,524 ಕೋ.ರೂ., ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ 3,571 ಕೋ.ರೂ., ದೇನಾ ಬ್ಯಾಂಕ್ 3,045 ಕೋ.ರೂ., ಬ್ಯಾಂಕ್ ಆಫ್ ಮಹಾರಾಷ್ಟ್ರ 3,173 ಕೋ.ರೂ., ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ 2,634 ಕೋ.ರೂ., ಕಾರ್ಪೊರೇಷನ್ ಬ್ಯಾಂಕ್ 2,187 ಕೋ.ರೂ., ಸಿಂಡಿಕೇಟ್ ಬ್ಯಾಂಕ್ 2,839 ಕೋ.ರೂ., ಆಂಧ್ರ ಬ್ಯಾಂಕ್ 1,890 ಕೋ.ರೂ., ವಿಜಯ ಬ್ಯಾಂಕ್ 1277 ಕೋ.ರೂ., ಅಲಹಾಬಾದ್ ಬ್ಯಾಂಕ್ 1,500 ಕೋ.ರೂ. ಮತ್ತು ಪಂಜಾಬ್ ಆ್ಯಂಡ್ ಸಿಂದ್ ಬ್ಯಾಂಕ್ 785 ಕೋ.ರೂ.ಗಳನ್ನು ಪಡೆಯಲಿವೆ.
ಬ್ಯಾಂಕ್‌ಗಳ ಆಡಳಿತವು ಅತ್ಯುಚ್ಚ ಮಾನದಂಡಗಳಿಗೆ ಅನುಗುಣವಾಗಿ ನಡೆಯುವಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ ಜೇಟ್ಲಿ, ಬಹು ದೊಡ್ಡ ಸಮಸ್ಯೆಯೊಂದು ನಮಗೆ ಬಳುವಳಿಯಾಗಿ ಬಂದಿತ್ತು, ಆದ್ದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ನಾವು ತೊಡಗಿಕೊಂಡಿದ್ದೆವು. ವಾಸ್ತವದಲ್ಲಿ ನಮ್ಮ ಪಾತ್ರ ಇದಕ್ಕೆ ಮಾತ್ರ ಸೀಮಿತವಾಗಿಲ್ಲ, ಹಿಂದೆ ಆಗಿದ್ದು ಮರುಕಳಿಸದಂತೆ ಖಚಿತಪಡಿಸಲು ಸಾಂಸ್ಥಿಕ ವ್ಯವಸ್ಥೆಯೊಂದನ್ನೂ ನಾವು ಸೃಷ್ಟಿಸಬೇಕಿದೆ ಎಂದು ಹೇಳಿದರು.