ಪಾಕ್ ಭೂಪ್ರದೇಶಕ್ಕೆ ಅಮೆರಿಕ ಡ್ರೋನ್ ದಾಳಿ
ಹಕ್ಕಾನಿ ನೆಟ್‌ವರ್ಕ್ ಭಯೋತ್ಪಾದಕರ ಸಾವು

ಪರಚಿನಾರ್ (ಪಾಕಿಸ್ತಾನ), ಜ. 24: ಅಮೆರಿಕದ ಡ್ರೋನ್‌ನಿಂದ ಹಾರಿಸಲಾದ ಎರಡು ಕ್ಷಿಪಣಿ ದಾಳಿಗಳಲ್ಲಿ ಹಕ್ಕಾನಿ ನೆಟ್‌ವರ್ಕ್‌ನ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ಕುರ್ರಮ್ ಬುಡಕಟ್ಟು ವಲಯದ ಸಮೀಪ ಅಫ್ಘಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ದಪ ಮಮುಝೈ ಗ್ರಾಮದಲ್ಲಿರುವ ಮನೆಯೊಂದರ ಮೇಲೆ ಕ್ಷಿಪಣಿಗಳನ್ನು ಹಾರಿಸಲಾಯಿತು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮೃತಪಟ್ಟ ಭಯೋತ್ಪಾದಕರು ಅಫ್ಘಾನ್ ತಾಲಿಬಾನ್‌ನ ಹಕ್ಕಾನಿ ನೆಟ್‌ವರ್ಕ್‌ಗೆ ಸೇರಿದವರು ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ 2017 ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿದಂದಿನಿಂದ, ಅಫ್ಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಪಾಕ್ ಗುಡ್ಡಗಾಡು ಪ್ರದೇಶಗಳಲ್ಲಿ ಅಮೆರಿಕ ನಡೆಸುತ್ತಿರುವ ಡ್ರೋನ್ ದಾಳಿಗಳಲ್ಲಿ ಹೆಚ್ಚಳವಾಗಿದೆ.
ಏಕಪಕ್ಷೀಯ ಕ್ರಮ: ಪಾಕ್
ತನ್ನ ಭೂಪ್ರದೇಶದಲ್ಲಿ ಅಮೆರಿಕ ಸೇನೆಯ ಡ್ರೋನ್‌ಗಳು ನಡೆಸಿರುವ ‘ಏಕಪಕ್ಷೀಯ’ ದಾಳಿಯನ್ನು ಪಾಕಿಸ್ತಾನ ಬುಧವಾರ ಖಂಡಿಸಿದೆ.
ಈ ದಾಳಿಯು, ಈಗಾಗಲೇ ಸಂಬಂಧ ಹಳಸಿರುವ ದೇಶಗಳ ನಡುವೆ ಹೊಸತಾಗಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ ಎನ್ನಲಾಗಿದೆ.
ಮಾನವರಹಿತ ವಿಮಾನದಿಂದ ಹಾರಿಸಲಾದ ಕ್ಷಿಪಣಿಗಳು ಪಾಕಿಸ್ತಾನದ ವಾಯುವ್ಯ ಭಾಗದ ಕುರ್ರಮ್ ವಲಯದಲ್ಲಿರುವ ‘ಅಫ್ಘಾನ್ ನಿರಾಶ್ರಿತ ಶಿಬಿರ’ಕ್ಕೆ ಅಪ್ಪಳಿಸಿವೆ ಎಂದು ಪಾಕಿಸ್ತಾನ ವಿದೇಶ ಕಚೇರಿ ಹೊರಡಿಸಿದ ಹೇಳಿಕೆಯೊಂದು ತಿಳಿಸಿದೆ.
‘‘ಇಂಥ ಏಕಪಕ್ಷೀಯ ಕ್ರಮಗಳು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎರಡು ದೇಶಗಳ ನಡುವಿನ ಸಹಕಾರದ ಸ್ಫೂರ್ತಿಗೆ ಮಾರಕವಾಗಿವೆ’’ ಎಂದು ಅದು ಅಭಿಪ್ರಾಯಪಟ್ಟಿದೆ.







