ಅಂಕೋಲಾ: ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ನಾಲ್ಕು ಮಂದಿಗೆ ಗಾಯ

ಅಂಕೋಲಾ, ಜ. 24: ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಅಂಕೋಲಾ ತಾಲೂಕಿನ ಮೂಲೆಮನೆ ಬಸ್ ನಿಲ್ದಾಣದ ಹತ್ತಿರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಚೆವರಲೆಟ್ ಕಾರು ಮತ್ತು ತೂಪಾನ್ ಕ್ರೂಸರ್ ವಾಹನಗಳ ನಡುವೆ ಅಪಘಾತವಾಗಿದೆ.
ಹೊನ್ನಾವರದಿಂದ ದಾಂಡೇಲಿಗೆ ಕಾರಿನಲ್ಲಿ ಹೋಗುತ್ತಿದ್ದ ಕೆನರಾ ಬ್ಯಾಂಕ್ ಮ್ಯಾನೇಜರ್ ಹೊನ್ನಾವರದ ಶ್ರೀಧರ್ ಎಲ್ ಭಟ್ (60) ಹಾಗೂ ಯಲ್ಲಾಪುರದಿಂದ ಮಲ್ಲಾಪುರಕ್ಕೆ ಕ್ರೂಸರ್ ತೂಪಾನ್ ವಾಹನದಲ್ಲಿ ಹೋಗುತ್ತಿದ್ದ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಗ್ರಾಮದ ಜ್ಯೋತಿ ಕಿರಣ ಮರಾಠಿ (30) ಸ್ಥಳದಲ್ಲೇ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಜ್ಯೋತಿ ಅವರ ಪತಿ ಕಿರಣ ಟಿಕ್ಕಾ ಮರಾಠಿ (42) ಹಾಗೂ ಅವರ ಪುತ್ರಿ ದಿಯಾ (8) ಮತ್ತು ಪುತ್ರ ದಿವೇಷ (6) ಹಾಗೂ ಕಾರು ಚಾಲಕ ಸಂತೋಷ ನಾಗಪ್ಪ ಕೇಸರಕರ (30) ಗಾಯಗೊಂಡಿದ್ದು, ಅವರನ್ನು ಯಲ್ಲಾಪುರದ ತಾಲೂಕು ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಎಸ್ ಆರ್ ಹಾಗೂ ಸಿಬ್ಬಂಧಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.







