ಪಾಲಿಕೆ ಸದಸ್ಯರ ಪ್ರವಾಸದ ವೆಚ್ಚದ ಮಾಹಿತಿ ನೀಡಲು ವಿಳಂಬ: ಆರೋಪ

ಶಿವಮೊಗ್ಗ , ಜ. 24: ಮಹಾನಗರ ಪಾಲಿಕೆ ಸದಸ್ಯರು 2016 ರಲ್ಲಿ ಕೈಗೊಂಡ ಅಧ್ಯಯನ ಪ್ರವಾಸದ ಮಾಹಿತಿ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ಬುಧವಾರ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ತೆರಿಗೆದಾರರ ಹಣದಲ್ಲಿ ಪಾಲಿಕೆ ಸದಸ್ಯರು ಅಧ್ಯಯನ ಪ್ರವಾಸ ಕೈಗೊಂಡಿದ್ದು, ಇದರ ವಿವರ ನೀಡುವಂತೆ 2017ರ ಜನವರಿಯಲ್ಲಿ ಒಕ್ಕೂಟದ ನಿರ್ದೇಶಕರೊಬ್ಬರು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಮಾಹಿತಿ ಒದಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಹಿತಿ ಹಕ್ಕು ಮೇಲ್ಮನವಿಗೆ ಪಾಲಿಕೆ ಆಯುಕ್ತರು ಆದೇಶಿಸಿ ಮೂರು ತಿಂಗಳಾದರೂ ಮಾಹಿತಿ ನೀಡದಿರುವುದು ಪಾಲಿಕೆ ಅಧಿಕಾರಿಗಳ ಕರ್ತವ್ಯಲೋಪವಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಪಾಲಿಕೆ ಸದಸ್ಯರು ಕೈಗೊಂಡಿದ್ದು ಅಧ್ಯಯನ ಪ್ರವಾಸವಾಗಿದ್ದು ಪ್ರವಾಸದ ನಂತರ 15 ದಿನಗಳೊಳಗೆ ಅಧ್ಯಯನ ವರದಿಯನ್ನು ಪಾಲಿಕೆ ವೆಬ್‍ಸೈಟ್‍ನಲ್ಲಿ ಹಾಕಬೇಕಾಗಿರುತ್ತದೆ. ಅದನ್ನು ಒಂದು ವರ್ಷ ಮೂರು ತಿಂಗಳು ಕಳೆದರೂ ಪಾಲಿಕೆಯ ವೆಬ್‍ಸೈಟ್‍ನಲ್ಲಿ ಹಾಕಿಲ್ಲ. ಹಾಗಾಗಿ ಸದಸ್ಯರ ಅಧ್ಯಯನ ವರದಿಯ ಪ್ರತಿಯನ್ನು ತಕ್ಷಣವೇ ಬಹಿರಂಗಗೊಳಿಸಬೇಕೆಂದು ಆಗ್ರಹಿಸಿದರು.
ಪ್ರವಾಸ ಎಲ್ಲ ಖರ್ಚು ವೆಚ್ಚದ ಸಂಪೂರ್ಣ ವಿವರ ಮತ್ತು ಪ್ರತಿಯೊಂದು ಖರ್ಚಿನ ಬಿಲ್/ ವೋಚರ್/ಇನ್‍ವಾಯ್ಸ್ ಗಳ ದೃಢೀಕೃತ ಪ್ರತಿಯನ್ನು ಒದಗಿಸಿಕೊಡಬೇಕು. ತೆರಿಗೆ ದಾರರ ಲಕ್ಷಾಂತರ ರೂ.ಹಣ ಖರ್ಚು ಮಾಡಿ ಕೈಗೊಂಡಿದ್ದ ಅಧ್ಯಯನ ಪ್ರವಾಸದ ವರದಿಯನ್ನು ವೆಬ್‍ಸೈಟ್‍ನಲ್ಲಿ ಹಾಕಲು ವಿಫಲವಾದ ಹಿಂದಿನ ಪಾಲಿಕೆ ಆಯುಕ್ತರ ಮೇಲೆ ಕ್ರಮಕ್ಕೆ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಕೆ.ವಿ.ವಸಂತ್ ಕುಮಾರ್, ಅಶೋಕ್ ಕುಮಾರ್, ಅಶ್ವಥ್ ನಾರಾಯಣ್ ಶೆಟ್ಟಿ, ನಾಗರಾಜ್, ಅಶೋಕ್ ಯಾದವ್, ದಿನೇಶ್ ಸೇರಿದಂತೆ ಮೊದಲಾದವರಿದ್ದರು.







