ಹರ್ಯಾಣದಲ್ಲಿ ಶಾಲಾ ಬಸ್ ಮೇಲೆ ಕಲ್ಲುತೂರಾಟ:ತೀವ್ರ ಆಕ್ರೋಶ ವ್ಯಕ್ತ
‘ಪದ್ಮಾವತ್’ ಚಲನಚಿತ್ರ ವಿವಾದ

ಹೊಸದಿಲ್ಲಿ, ಜ.25: ‘ಪದ್ಮಾವತ್’ ಚಲನಚಿತ್ರ ಬಿಡುಗಡೆಯನ್ನು ವಿರೋಧಿಸುವ ನೆಪದಲ್ಲಿ ಶಾಲಾ ಬಸ್ನ ಮೇಲೆ ದಾಳಿ ನಡೆಸಿರುವ ಶ್ರೀರಜಪೂತ್ ಕರ್ಣಿ ಸೇನೆಯ ಬೆಂಬಲಿಗರ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬುಧವಾರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಗುರ್ಗಾಂವ್ನ ಜಿಡಿ ಗೊಯೆಂಕಾ ವರ್ಲ್ಡ್ ಸ್ಕೂಲ್ನ ನರ್ಸರಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕಿಯರು, ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಪ್ರತಿಭಟನಾ ನಿರತರು ದಾಳಿ ನಡೆಸಿ ಬಸ್ನ ಗಾಜುಗಳನ್ನು ಪುಡಿಪುಡಿಗೈದಿದ್ದಾರೆ. ಮಾತ್ರವಲ್ಲ ಬಸ್ ಮೇಲೆ ಕಲ್ಲುತೂರಾಟವನ್ನು ನಡೆಸಿದ್ದರು. ದಾಳಿಗೆ ಬೆಚ್ಚಿ ಬಿದ್ದ ಮಕ್ಕಳು ಬಸ್ ಸೀಟ್ನ ಅಡಿ ಅವಿತುಕೊಂಡು ಅಪಾಯದಿಂದ ಪಾರಾಗಿದ್ದಾರೆ. ಕೆಲವು ಮಕ್ಕಳು ಚೀರಾಡುತ್ತಿರುವುದು ಮೊಬೈಲ್ ಫೋನ್ ವಿಡಿಯೋದಲ್ಲಿ ಸೆರೆಯಾಗಿದೆ. ಸಮಯಪ್ರಜ್ಞೆ ಮೆರೆದ ಚಾಲಕ ಬಸ್ನ್ನು ದಾಳಿಕೋರರಿಂದ ರಕ್ಷ್ಪಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾನೆ.
ಘಟನೆ ನಡೆದಾಗ ಅಲ್ಲೇ ಇದ್ದ ಪೊಲೀಸರು ವಿದ್ಯಾರ್ಥಿಗಳ ನೆರವಿಗೆ ಬಂದಿಲ್ಲ ಎಂದು ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗ ಆರೋಪಿಸಿದ್ದಾರೆ.
ದಾಳಿಯ ಬಳಿಕ ಬಸ್ ಸೀಟಿನಲ್ಲಿ ಕಿಟಕಿ ಗಾಜಿನ ಚೂರುಗಳು ಬಿದ್ದಿದ್ದವು.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘಟನೆಯನ್ನು ಖಂಡಿಸಿದ್ದು, ಹರ್ಯಾಣ ಸರಕಾರದ ನಿರ್ಲಕ್ಷ ಧೋರಣೆಯನ್ನು ಟೀಕಿಸಿದ್ದಾರೆ.
‘‘ಇದೊಂದು ತುಂಬಾ ಅವಮಾನಕಾರಿ ವಿಷಯ. ಸರಕಾರ ಇಂತಹ ದುಷ್ಕತ್ಯಕ್ಕೆ ಅನುವು ಮಾಡಿಕೊಟ್ಟಿದ್ದು ಅಕ್ಷಮ್ಯ ಅಪರಾಧ’’ ಎಂದು ಹೇಳಿದ್ದಾರೆ.
'ಪದ್ಮಾವತ್’ ಹಿಂದಿ ಚಲನಚಿತ್ರ ಬಿಡುಗಡೆಯನ್ನು ಪ್ರತಿಭಟಿಸಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುವುದಕ್ಕೆ ಬಿಜೆಪಿ ಸರಕಾರ ತಾತ್ವಿಕವಾಗಿ ಬೆಂಬಲ ನೀಡಿದ್ದು, ಬಿಜೆಪಿ ದ್ವೇಷ ಹಾಗೂ ಹಿಂಸಾಚಾರದ ಮೂಲಕ ದೇಶದಲ್ಲಿ ಬೆಂಕಿ ಹಚ್ಚುತ್ತಿದೆ ಎಂದು ಗುರುಗಾಂವ್ನಲ್ಲಿ ಹಿಂಸಾನಿರತ ಗುಂಪು ಶಾಲಾ ಬಸ್ನ ಮೇಲೆ ದಾಳಿ ನಡೆಸಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಶಾಲಾ ಬಸ್ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಗುರುವಾರ ಗುರುಗಾಂವ್ನ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ.
Karni sinvh sena attacked school bus of G D Goenka in gurgaon .. @TajinderBagga @narendramodi @rajnathsingh @SirPareshRawal is this d society we want pic.twitter.com/cQ6Zkrxxsx
— Romica (@romica786) January 24, 2018