ಕೊಳ್ಳೇಗಾಲ:ವಕೀಲರ ಸಂಘದ ವತಿಯಿಂದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಕೊಳ್ಳೇಗಾಲ,ಜ.25: ಮಹಾದಾಯಿ ನದಿನೀರು ಹಂಚಿಕೆ ವಿಚಾರ ಬಂದ್ ಗೆ ಬೆಂಬಲ ಹಾಗೂ ವಕೀಲ ಗೋಕುಲ್ ಗೋವರ್ಧನ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತಾಲೂಕು ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರು ಸಮಾವೇಶಗೊಂಡು ಒಂದು ದಿನದ ಕಲಾಪ ಬಹಿಷ್ಕರಿಸಿ ವಕೀಲನ ಮೇಲೆ ಹಲ್ಲೆ ಖಂಡಿಸಿ ಹಾಗೂ ಮಹಾದಾಯಿ ನದಿ ನೀರಿನ ಹಂಚಿಕೆಯ ಬೆಂಬಲಿಸಿ ಘೋಷಣೆ ಕೂಗುತ್ತಾ ಪ್ರತಿಭಟಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ಬಸವರಜು ಮಾತನಾಡಿ, ಮಹದಾಯಿ ನದಿ ನೀರಿನ ಹಂಚಿಕೆ ವಿಚಾರವಾಗಿ ಇಂದು ಕಲಾಪವನ್ನು ಬಹಿಷ್ಕರಿಸಲಾಗಿದೆ. ಪ್ರಧಾನಿ ಮೋದಿಯವರು ಕರ್ನಾಟಕ ಮತ್ತು ಗೋವಾದ ಮುಖ್ಯಂತ್ರಿಯನ್ನು ಕರೆದು ಮಹಾದಾಯಿ ವಿಚಾರವಾಗಿ ಸಭೆ ನಡೆಸಿ ಉತ್ತರ ಕರ್ನಾಟಕದ ಜನರ ಸಂಕಷ್ಟವನ್ನು ಪರಿಹರಿಸಬೇಕು ಎಂದರು.
ಅದೇ ರೀತಿ ಮೈಸೂರಿನಲ್ಲಿ ವಕೀಲ ಗೋಕುಲ್ ಗೋವರ್ಧನ್ ಮೇಲೆ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ, ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎನ್.ಬಸವರಾಜು, ಹಿರಿಯ ವಕೀಲರಾದ ಮಾದಪ್ಪ, ಮಹದೇವು, ನಟರಾಜು, ಶ್ರೀರಾಮುಲು, ಸಿ.ಬಿ.ಮಹೇಶ್‍ಕುಮಾರ್, ಪ್ರವೀಣ್, ನಾಗೇಂದ್ರ, ಮೋಹನ್‍ಕುಮಾರ್, ಸಿದ್ದರಾಜು, ಮಹದೇವಸ್ವಾಮಿ, ಸಂತೋಷ್ ಹಾಗೂ ಇನ್ನಿತರರು ಹಾಜರಿದ್ದರು.