ರಾಜಕೀಯ ಪ್ರವಾಸಕ್ಕೆ ಎಂಜಿಆರ್ ಸಿನೆಮಾದ ಹೆಸರಿಟ್ಟ ಕಮಲ್ ಹಾಸನ್
.jpg)
ಚೆನ್ನೈ, ಜ.25: ಖ್ಯಾತ ನಟ ಕಮಲ್ ಹಾಸನ್ ತಮ್ಮದೇ ರಾಜಕೀಯ ಪಕ್ಷವನ್ನು ಈಗಾಗಲೇ ಘೋಷಿಸಿದ್ದಾರೆ. ಫೆಬ್ರವರಿ 21ರಂದು ಅವರು ರಾಜ್ಯಾದ್ಯಂತ ತಮ್ಮ ರಾಜಕೀಯ ಪ್ರವಾಸವನ್ನು ಕೈಗೊಳ್ಳಲಿದ್ದು ಅದಕ್ಕೆ ತಮಿಳು ಸಿನೆಮಾರಂಗದ ಮೇರು ನಟ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಂ.ಜಿ ರಾಮಚಂದ್ರನ್ ಅಭಿನಯದ ಯಶಸ್ವಿ ಸಿನೆಮಾ ‘ನಾಳೈ ನಮದೆ’ ಎಂದು ಹೆಸರಿಟ್ಟಿದ್ದಾರೆ.
ನೂತನ ಪಕ್ಷವನ್ನು ಘೋಷಿಸಿರುವ ಕಮಲ್, ಒಂದು ಗ್ರಾಮವನ್ನು ದತ್ತು ಪಡೆದು, ಶಿಕ್ಷಣ, ಸಾರಿಗೆ ಮತ್ತು ನಾಗರಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಅದನ್ನು ಮಾದರಿ ಗ್ರಾಮವಾಗಿ ಮಾಡುವ ತಮ್ಮ ಯೋಜನೆಯ ಬಗ್ಗೆ ಗುರುವಾರದಂದು ವಿವರಿಸಿದ್ದಾರೆ.
ಆನಂದ ವಿಕಟನ್ ಎಂಬ ವಾರ ಪತ್ರಿಕೆಯಲ್ಲಿ ಈ ವಾರದ ತನ್ನ ಲೇಖನಗಳ ಸರಣಿ ಎನ್ನುಳ್ ಮಯಮ್ ಕೊಂಡ ಪುಯಲ್ (ನನ್ನಲ್ಲಿ ಕೇಂದ್ರತವಾಗಿರುವ ಬಿರುಗಾಳಿ) ಅನ್ನು ಬರೆದಿರುವ ಕಮಲ್ ಅದಕ್ಕೆ ಮುನ್ಮದಿರಿ ಗ್ರಾಮಂ..ನಾಳೈ ನಮದೆ ಪಯಣಂ. ಮುಳು ಅರಸಿಯಲ್ ಪ್ಲಾನ್ (ಮಾದರಿ ಗ್ರಾಮ... ನಾಳೆ ನಮ್ಮದೆ ಪ್ರವಾಸ. ಸಂಪೂರ್ಣ ರಾಜಕೀಯ ಯೋಜನೆ) ಎಂದು ಶೀರ್ಷಿಕೆ ನೀಡಿದ್ದಾರೆ. ಪ್ರವಾಸಕ್ಕೆ ಎಂಜಿಆರ್ ಸಿನೆಮಾದ ಹೆಸರನ್ನು ನೀಡಿರುವ ಬಗ್ಗೆ ಮಾತನಾಡಿದ ಕಮಲ್, ಅದರಿಂದ ಗತಕಾಲದ ಮೇರುನಟನ ನೆನಪಾಗುತ್ತದೆ. ಅವೆಲ್ಲವೂ ಒಳ್ಳೆಯ ನೆನಪುಗಳಾಗಿರುವ ಕಾರಣ ನಾವು ಆ ಹೆಸರನ್ನು ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಎಐಡಿಎಂಕೆಯು ಉಚಿತ ಲ್ಯಾಪ್‌ಟಾಪ್ ಪೂರೈಸುವ ಯೋಜನೆಯ ಬಗ್ಗೆ ವ್ಯಂಗ್ಯವಾಡಿದ ಕಮಲ್, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ತಿನ್ನಲಾಗುವುದಿಲ್ಲ. ಆದರೆ ಅವುಗಳು ಮಾತ್ರ ಇಂದು ಹಲವು ಹಳ್ಳಿಗಳನ್ನು ತಲುಪಿವೆ. ಕೇವಲ ಲ್ಯಾಪ್‌ಟಾಪ್ ಒದಗಿಸುವುದರಿಂದ ಜ್ಞಾನ ಹೆಚ್ಚಾಗುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅದನ್ನು ನಿರ್ವಹಿಸಲೂ ನಿಮ್ಮಲ್ಲಿ ಜ್ಞಾನವಿರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದ ಕಮಲ್, ಜನರಿಗೆ ಮೀನು ಹಿಡಿಯುವ ತರಬೇತಿಯನ್ನು ನೀಡಬೇಕು. ಅದರಿಂದ ಮಾತ್ರ ಅವರಿಗೆ ಸ್ವಾಭಿಮಾನದ ಜೀವನವನ್ನು ನಡೆಸಲು ಸಾಧ್ಯ ಎಂದು ಅಭಿಪ್ರಾಯಿಸಿದ್ದಾರೆ.
ಎಲ್ಲವನ್ನೂ ಒಬ್ಬನಿಂದಲೇ ಬದಲಾಯಿಸಲು ಸಾಧ್ಯವಾಗಿದ್ದರೆ ಅಥವಾ ಸರಕಾರವು ಪರಿವರ್ತನೆಯ ಹಾದಿಯಲ್ಲಿ ನಡೆದು ನನಗಿಂತಲೂ ಉತ್ತಮ ಕೆಲಸಗಳನ್ನು ಮಾಡಿದರೆ ಆಗ ನಾನು ನನ್ನ ಕೆಲಸ ಮುಗಿಯಿತು ಎಂದು ಭಾವಿಸುತ್ತೇನೆ. ಟ್ವೀಟ್ ಮಾಡುವುದರಲ್ಲಿ ಅರ್ಥವಿಲ್ಲ. ನಾನು ಟ್ವೀಟ್‌ಗಳ ಸುರಿಮಳೆಯನ್ನೇ ಮಾಡಿದ್ದೇನೆ. ಆದರೆ ಅದು ಅವರಿಗೆ ತಲುಪದಿದ್ದರೆ ಅದರಿಂದಾಗುವ ಲಾಭವೇನು ಎಂದು ಕಮಲ್ ಪ್ರಶ್ನಿಸಿದ್ದಾರೆ.