ಜಿಪಿಎಸ್ ಆ್ಯಪ್ ನೋಡುತ್ತಾ ಕಾರನ್ನು ನೇರವಾಗಿ ಹಿಮಗಟ್ಟಿದ ಸರೋವರಕ್ಕೆ ನುಗ್ಗಿಸಿದ ಚಾಲಕ

ವಾಷಿಂಗ್ಟನ್,ಜ.25 : ತನ್ನ ಜಿಪಿಎಸ್ ಆ್ಯಪ್ ಅನ್ನೇ ಕಣ್ಣು ಮುಚ್ಚಿ ಅನುಸರಿಸಿದ ವ್ಯಕ್ತಿಯೊಬ್ಬ ಇಬ್ಬರು ಪ್ರಯಾಣಿಕರಿದ್ದ ತನ್ನ ಎಸ್‍ಯುವಿಯನ್ನು ನೇರವಾಗಿ ಈಶಾನ್ಯ ರಾಜ್ಯವಾದ ವರ್ಮೊಂಟ್ ಎಂಬಲ್ಲಿನ ಹಿಮಗಟ್ಟಿದ ಸರೋವರವೊಂದಕ್ಕೆ ನುಗ್ಗಿಸಿದ ಘಟನೆ ವರದಿಯಾಗಿದೆ.
ಕಾರಿನಲ್ಲಿದ್ದ ಮೂವರೂ ಸ್ನೇಹಿತರಾಗಿದ್ದು ಇನ್ನೊಬ್ಬರಿಂದ ಎರವಲು ಪಡೆದು ಈ ಕಾರನ್ನು ಚಲಾಯಿಸುತ್ತಿದ್ದರು. ಆದರೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ವಾಹನವನ್ನು ಚಲಾಯಿಸುತ್ತಿದ್ದ ವ್ಯಕ್ತಿ ಜಿಪಿಎಸ್ ಸೂಚನೆಗಳನ್ನು ಪಾಲಿಸುವುದರಲ್ಲಿ ಅದೆಷ್ಟು ಮಗ್ನನಾಗಿದ್ದನೆಂದರೆ ಅದು ನೇರವಾಗಿ ಚಲಿಸು ಎಂದಿದ್ದಕ್ಕೆ ನೇರವಾಗಿ ಹೋಗಿ ಹಿಮಕ್ಕೆ ವಾಹನ ಅಪ್ಪಳಿಸುವಂತಾಗಿತ್ತು.
ಚಾಂಪ್ಲೇನ್ ಎಂಬ ಆ ಸರೋವರಕ್ಕೆ ಆ ವಾಹನ ಪ್ರವೇಶಿಸುತ್ತಿದ್ದಂತೆಯೇ ಅದರಲ್ಲಿದ್ದ ಹಿಮದಲ್ಲಿ ಬಿರುಕುಂಟಾಗಿ ಜೀಪು ಮುಳುಗಲಾರಂಭಿಸಿ ಅದರ ಹಿಂಬದಿಯ ಬಂಪರ್ ಮಾತ್ರ ಹೊರಕ್ಕೆ ಕಾಣಿಸುತ್ತಿತ್ತು. ವಾಹನದಲ್ಲಿದ್ದ ಯಾರೂ ಮದ್ಯದ ನಶೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ರಘಟನೆ ನಡೆದಾಗ ಭಾರೀ ಮಳೆಯಾಗುತ್ತಿತ್ತು ಹಾಗೂ ಎಲ್ಲ ಕಡೆ ಮಂಜು ಕವಿದ ವಾತಾವರಣವಿತ್ತು.
ಕೊನೆಗೆ ರಕ್ಷಣಾ ತಂಡಗಳು ವಾಹನವನ್ನು ಹಿಮದಿಂದ ಹೊರಗೆಳೆದಿವೆ.





