ಆರ್ಥಿಕ ಅಪರಾಧಗಳಿಂದ ದೇಶದಲ್ಲಿ ಅಸಮತೋಲನ: ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ,ಜ.25: 8,000ಕ್ಕೂ ಅಧಿಕ ಹೂಡಿಕೆದಾರನ್ನು ವಂಚಿಸಿರುವ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಇಬ್ಬರು ನಿರ್ದೇಶಕರಿಗೆ ಗುರುವಾರ ಜಾಮೀನು ನಿರಾಕರಿಸಿದ ದಿಲ್ಲಿಯ ವಿಶೇಷ ನ್ಯಾಯಾಲಯವೊಂದು, ಆರ್ಥಿಕ ಅಪರಾಧಗಳು ರಾಷ್ಟ್ರೀಯ ಆರ್ಥಿಕತೆಯಲ್ಲಿ ಸಂಪೂರ್ಣ ಅಸಮತೋಲನವನ್ನುಂಟು ಮಾಡುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಒಂದೇ ಎಫ್‌ಐಆರ್‌ನಲ್ಲಿ ಎಲ್ಲ ದೂರುಗಳನ್ನು ಸೇರಿಸಿರುವುದಕ್ಕೆ ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧ ಘಟಕವನ್ನೂ ತರಾಟೆಗೆತ್ತಿಕೊಂಡ ವಿಶೇಷ ನ್ಯಾಯಾಧೀಶರಾದ ಕಾಮಿನಿ ಲವು ಅವರು, ಇದು ಆರೋಪಿಗಳ ವಿರುದ್ಧದ ಆರೋಪಗಳನ್ನು ದುರ್ಬಲ ಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.
ಅರ್ಥ್ ಇನ್‌ಫ್ರಾಸ್ಟ್ರಕ್ಚರ್ ಲಿ.ನ ನಿರ್ದೇಶಕರಾದ ಅವಧೇಶ ಕುಮಾರ್ ಗೋಯೆಲ್ ಮತ್ತು ಅತುಲ್ ಗುಪ್ತಾ ಅವರಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯವು, ಇಂತಹ ಅಪರಾಧಗಳು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವುದರಿಂದ ಇವುಗಳನ್ನು ಗಂಭೀರವಾಗಿ ನಿಭಾಯಿಸಬೇಕು ಎಂದು ಹೇಳಿತು.
ಗೋಯೆಲ್ ಮತ್ತು ಗುಪ್ತಾ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದ ಯಮುನಾ ಎಕ್ಸಪ್ರೆಸ್‌ವೇ ಬಳಿ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವ ಎಂಟು ಯೋಜನೆಗಳನ್ನು ಪ್ರಕಟಿಸಿ ಸುಮಾರು 8,000 ಹೂಡಿಕೆದಾರರಿಂದ ಪ್ರತಿ ಯೋಜನೆಗೂ 1,200 ಕೋ.ರೂ.ಗಳಿಂದ 1,500 ಕೋ.ರೂ.ವರೆಗೆ ಹಣವನ್ನು ಸಂಗ್ರಹಿಸಿದ್ದು, ಈ ವರೆಗೂ ಯೋಜನೆಗಳನ್ನು ಪೂರ್ಣಗೊಳಿಸದೆ ಅಥವಾ ಹಸ್ತಾಂತರಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೇಶವು ವ್ಯಕ್ತಿಗಿಂತ ದೊಡ್ಡದು. ವ್ಯಕ್ತಿ ಸಮಾಜ ಮತ್ತು ದೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಗಂಭೀರ ಅಪರಾಧದಲ್ಲಿ ಭಾಗಿಯಾಗಿರುವಾಗ ಆತನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುವುದು ಸೂಕ್ತವಲ್ಲ ಎಂದು ನ್ಯಾಯಾಲಯವು ಹೇಳಿತು.
ದೋಷಾರೋಪಣ ಪಟ್ಟಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಮತ್ತು ಆರೋಪಿಗಳನ್ನು ಇನ್ನೂ ಬಂಧನದಲ್ಲಿರಿಸುವುದರಿಂದ ಯಾವುದೇ ಲಾಭವಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದರೆ ಜಾಮೀನು ಅರ್ಜಿಯನ್ನು ವಿರೋಧಿಸಿದ ಸಂತ್ರಸ್ತ ಹೂಡಿಕೆದಾರರ ಪರ ವಕೀಲ ಅಮಿತ ಕುಮಾರ್ ಅವರು, ಆರೋಪಿಗಳು ತಲೆ ಮರೆಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದರು. ಆರೋಪಿಗಳ ಪೈಕಿ ಗೋಯೆಲ್ ಬ್ಯಾಂಕಾಕ್‌ಗೆ ಪರಾರಿಯಾಗುವ ಪ್ರಯತ್ನದಲ್ಲಿದ್ದಾಗ ಲುಕ್‌ಔಟ್ ನೋಟಿಸ್‌ನ ಆಧಾರದಲ್ಲಿ ಆತನನ್ನು ಬಂಧಿಸಲಾಗಿತ್ತು ಎಂದು ಅವರು ಬೆಟ್ಟು ಮಾಡಿದರು.