ಮಹಾದಾಯಿ ಸಮಸ್ಯೆ ಬಗೆಹರಿಸುವಲ್ಲಿ ಮೋದಿಗೆ ಕನಿಷ್ಟ ಕಾಳಜಿಯಿಲ್ಲ: ಕುಮಾರಸ್ವಾಮಿ

ಬೆಂಗಳೂರು, ಜ.25: ಮಹಾದಾಯಿ ನೀರು ಹಂಚಿಕೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದ ಕುರಿತು ಕನಿಷ್ಟ ಕಳಕಳಿ ಇದ್ದಿದ್ದರೆ ಈ ಹಿಂದೆಯೇ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಗುರುವಾರ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ಸಮಸ್ಯೆಯನ್ನು ಬಗೆಹರಿಸಿ ಕರ್ನಾಟಕ ರೈತರ ಬದುಕನ್ನು ಹಸನಾಗಿಸಬೇಕೆಂದು ಪ್ರಧಾನಿ ಮೋದಿಗೆ ಯಾವುದೇ ರೀತಿಯ ಆಸಕ್ತಿಯಿಲ್ಲ. ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಕರ್ನಾಟಕ ಬಂದ್, ಪ್ರತಿಭಟನೆಗಳಿಗೆ ಕೇಂದ್ರ ಸರಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಕಿಡಿಕಾರಿದರು.
ರಾಜ್ಯದ ರೈತರು ಬರಗಾಲಕ್ಕೆ ತುತ್ತಾಗಿ ತಮ್ಮ ಬದುಕನ್ನು ನಡೆಸಲು ಹರಸಾಹಸ ಪಡುತ್ತಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆಗೆ ಕನಿಷ್ಟ ಬೆಲೆಯೂ ಸಿಗುತ್ತಿಲ್ಲ. ಇದರಿಂದ ರೋಸಿ ಹೋಗಿರುವ ರೈತ ಸಮುದಾಯ ಆತ್ಮಹತ್ಯೆಗೆ ಶರಣಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ರೈತರಿಗೆ ನೀರು ಕೊಡಬೇಕೆಂಬ ಯಾವುದೇ ಕಾಳಜಿ ಬಿಜೆಪಿ ಹಾಗೂ ಕಾಂಗ್ರೆಸಿಗಿಲ್ಲ. ರೈತರ ಸಮಸ್ಯೆಯೇ ಅವರಿಗೆ ಬಂಡವಾಳವಾಗಿದೆ. ಹೀಗಾಗಿ ಕನ್ನಡಪರ ಸಂಘಟನೆಗಳನ್ನು ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಪ್ರತಿಭಟನೆ ಹಾಗೂ ಕರ್ನಾಟಕ ಬಂದ್‌ಗೆ ಕರೆ ನೀಡುತ್ತಿವೆ ಎಂದು ಅವರು ಆರೋಪಿಸಿದರು.







