ತೆರಿಗೆ ಮರುಪಾವತಿ ವಂಚನಾ ಜಾಲ ಬೆಳಕಿಗೆ: ಐಟಿ ಇಲಾಖೆಗೆ 18 ಕೋಟಿ ರೂ. ವಂಚನೆ

ಹೊಸದಿಲ್ಲಿ, ಜ.25: ನಕಲಿ ದಾಖಲೆಗಳ ಮೂಲಕ ತೆರಿಗೆ ಮರುಪಾವತಿ ಸೌಲಭ್ಯ ಪಡೆಯುವ ವಂಚನಾ ಜಾಲವನ್ನು ಆದಾಯತೆರಿಗೆ ಇಲಾಖೆ ಬೇಧಿಸಿದ್ದು, ಈ ಮೂಲಕ ಇಲಾಖೆಗೆ ಸುಮಾರು 18 ಕೋಟಿ ರೂ. ವಂಚಿಸಿರುವುದನ್ನು ಪತ್ತೆಹಚ್ಚಿದೆ. ಐಬಿಎಂ, ವೊಡಾಫೋನ್, ಇನ್‌ಫೋಸಿಸ್ ಮುಂತಾದ ಪ್ರಮುಖ ಸಂಸ್ಥೆಗಳ ಉದ್ಯೋಗಿಗಳು ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ (ಸಿಎ)ಒಬ್ಬರ ನೆರವಿನಿಂದ ತೆರಿಗೆ ಮರುಪಾವತಿ ಸೌಲಭ್ಯ ಪಡೆದು ವಂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುತಿಸಲಾಗದ ಸಿಎ ಒಬ್ಬರ ನಿವಾಸದ ಮೇಲೆ ಆದಾಯತೆರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಈ ವೇಳೆ ಹಲವಾರು ಗ್ರಾಹಕರಿಗೆ ಸಂಬಂಧಿಸಿದ ನಕಲಿ ಹಕ್ಕು ಕೋರಿಕೆ ದಸ್ತಾವೇಜು(ಕ್ಲೈಮ್ ಡಾಕ್ಯುಮೆಂಟ್)ಗಳನ್ನು ವಾಟ್ಸ್ ಆ್ಯಪ್ ಸಂದೇಶದ ಸಹಿತ ಜಫ್ತಿ ಮಾಡಿದ್ದಾರೆ.
ಈ ಚಾರ್ಟರ್ಡ್ ಅಕೌಂಟೆಂಟ್ ನಕಲಿ ಆದಾಯತೆರಿಗೆ ರಿಟರ್ನ್ಸ್ ಸಲ್ಲಿಸಿ , ಬಳಿಕ ಮನೆ ಆಸ್ತಿಗಳಲ್ಲಿ ನಷ್ಟ ಉಂಟಾಗಿದೆ ಎಂದು ಮೋಸದ ಮರುಪಾವತಿ ಹಕ್ಕು ಕೋರಿಕೆ ಸಲ್ಲಿಸಲು ನೆರವಾಗುತ್ತಿದ್ದ . ಇಂತಹ ಸುಮಾರು 1,000 ‘ರಿಟರ್ನ್ಸ್’ಗಳನ್ನು ಸಲ್ಲಿಸುವ ಮೂಲಕ ಸುಮಾರು 18 ಕೋಟಿ ರೂ.ನಷ್ಟು ನಷ್ಟ ಉಂಟು ಮಾಡಲಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ. ಈ ಚಾರ್ಟರ್ಡ್ ಅಕೌಂಟೆಂಟ್(ಲೆಕ್ಕಪತ್ರ ಪರಿಶೋಧಕ)ನ ಗ್ರಾಹಕರಾಗಿರುವ ಬೆಂಗಳೂರಿನ 50ಕ್ಕೂ ಹೆಚ್ಚು ಪ್ರಮುಖ ಸಂಸ್ಥೆಗಳ ಉದ್ಯೋಗಿಗಳ ಮೇಲೆ ಇಲಾಖೆ ನಿಗಾ ಇರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಬಿಎಂ, ವೊಡಾಫೋನ್, ಸಪ್ಲಾಬ್ಸ್, ಬಯೋಕಾನ್, ಇನ್‌ಫೋಸಿಸ್, ಐಸಿಐಸಿಐ ಬ್ಯಾಂಕ್, ಸಿಸ್ಕೊ, ಥಾಮ್ಸನ್ ರಾಯ್ಟರ್ಸ್ (ಇಂಡಿಯಾ) ಲಿ. ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳ ಉದ್ಯೋಗಿಗಳು ಈ ಚಾರ್ಟರ್ಡ್ ಅಕೌಂಟೆಂಟ್‌ನ ಗ್ರಾಹಕರಾಗಿದ್ದಾರೆ. ಇವರಲ್ಲಿ ಹೆಚ್ಚಿನ ವರನ್ನು ಅವರ ಕಚೇರಿಯಲ್ಲಿ ಬುಧವಾರ ವಿಚಾರಣೆ ನಡೆಸಲಾಗಿದೆ. ಈ ರೀತಿಯ ಬೃಹತ್ ಪ್ರಮಾಣದ ತೆರಿಗೆ ಮರುಪಾವತಿ ವಂಚನೆ ಪ್ರಕರಣದ ವಿಚಾರಣೆಯನ್ನು ಇದೇ ಮೊದಲ ಬಾರಿಗೆ ಇಲಾಖೆ ಕೈಗೆತ್ತಿಕೊಂಡಿದೆ . ವಿಚಾರಣೆಗೆ ಒಳಪಟ್ಟಿರುವ ಹಲವು ಉದ್ಯೋಗಿಗಳು, ತಮಗೆ ‘ಮನೆ ಆಸ್ತಿಯಿಂದ ಆದಾಯ’ ಪ್ರವರ್ಗದಲ್ಲಿ ವಾಸ್ತವಿಕ ನಷ್ಟ ಉಂಟಾಗಿಲ್ಲ ಎಂದು ತಿಳಿಸಿದ್ದು , ಚಾರ್ಟರ್ಡ್ ಅಕೌಂಟೆಂಟ್‌ನನ್ನು ದೂರಿದ್ದಾರೆ. ಕೆಲವು ‘ಕ್ಲೈಮ್’ಗಳ ಮೂಲಕ ಮರುಪಾವತಿ ಸಾಧ್ಯ ಎಂದು ಚಾರ್ಟರ್ಡ್ ಅಕೌಂಟೆಂಟ್ ತಮಗೆ ಹೇಳಿದ್ದ ಎಂದು ಈ ಉದ್ಯೋಗಿಗಳು ತಿಳಿಸಿದ್ದಾರೆ. ಹೀಗೆ ಪಡೆದ ಮರುಪಾವತಿ ಮೊತ್ತದಲ್ಲಿ ಶೇ.10ರಷ್ಟನ್ನು ‘ಸಾಂದರ್ಭಿಕ ಖರ್ಚು’ ಎಂದು ಚಾರ್ಟರ್ಡ್ ಅಕೌಂಟೆಂಟ್ ಪಡೆಯುತ್ತಿದ್ದ . ಚಾರ್ಟರ್ಡ್ ಅಕೌಂಟೆಂಟ್‌ನ ಮನೆಯಲ್ಲಿ ತಪಾಸಣೆ ವೇಳೆ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ನಲ್ಲಿದ್ದ ವಾಟ್ಸಾಪ್ ಸಂದೇಶಗಳು ಈ ಹೇಳಿಕೆಗೆ ಪುರಾವೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ. ಆದರೆ ತನ್ನ ಗ್ರಾಹಕರು ಒತ್ತಾಯ ಮಾಡಿದ ಕಾರಣ ತಾನು ಈ ರೀತಿಯ ನಕಲಿ ತೆರಿಗೆ ಮರುಪಾವತಿ ‘ಕ್ಲೈಮ್’ ಮಾಡಿರುವುದಾಗಿ ಚಾರ್ಟರ್ಡ್ ಅಕೌಂಟೆಂಟ್ ಹೇಳಿದ್ದಾನೆ. ಚಾರ್ಟರ್ಡ್ ಅಕೌಂಟೆಂಟ್ ಹಾಗೂ ವಂಚಿಸಿ ತೆರಿಗೆ ಮರುಪಾವತಿ ಸೌಲಭ್ಯ ಪಡೆದಿರುವ ಉದ್ಯೋಗಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದ್ದು, ಈ ರೀತಿಯ ಮೋಸದ ಕೃತ್ಯ ನಡೆಸದಂತೆ ಉದ್ಯೋಗಿಗಳನ್ನು ಎಚ್ಚರಿಸಿದೆ. ತೆರಿಗೆ ಪಾವತಿದಾರನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ರೀತಿಯ ಕೃತ್ಯ ನಡೆಸಬಾರದು ಎಂದು ಇಲಾಖೆ ಎಚ್ಚರಿಸಿದೆ.
ಈ ರೀತಿ ಮಾಡುವುದರಿಂದ ವಿಶ್ವಾಸಾರ್ಹತೆಯನ್ನು ಉಲ್ಲಂಘನೆಯ ಜೊತೆಗೆ ತೆರಿಗೆ ಪಾವತಿದಾರನು ಭಾರೀ ಮೊತ್ತದ ಬಡ್ಡಿ, ದಂಡ ಪಾವತಿಸುವುದರ ಜೊತೆಗೆ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ ಎಂದು ಇಲಾಖೆ ಎಚ್ಚರಿಸಿದೆ. ಐಟಿ ರಿಟರ್ನ್ಸ್ ಸಲ್ಲಿಸುವಾಗ ಯಾರಾದರೂ ತೆರಿಗೆ ಪಾವತಿದಾರರು ಸುಳ್ಳು ಹೇಳಿಕೆ ನೀಡಿ ಕಡಿಮೆ ತೆರಿಗೆ ಪಾವತಿ ಅಥವಾ ತೆರಿಗೆ ಮರುಪಾವತಿ ಸೌಲಭ್ಯ ಪಡೆಯಲು ಯತ್ನಿಸಿದ್ದರೆ ಅಂತವರು ತಕ್ಷಣ ತಮ್ಮ ಸರಿಯಾದ ಆದಾಯವನ್ನು ಉಲ್ಲೇಖಿಸಿ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಬೇಕು ಹಾಗೂ ಸೂಕ್ತ ತೆರಿಗೆ ಪಾವತಿಸಬೇಕು ಎಂದು ಇಲಾಖೆ ಸೂಚಿಸಿದೆ.