ಜಾತಿ ಮತ್ತು ಧರ್ಮಾಧರಿತ ರಾಜಕೀಯ ಇರಬಾರದೆಂದು ನಾನು ಬಯಸುತ್ತೇನೆ: ಮೋಹನ್ ಭಾಗವತ್

ಮುಂಬೈ, ಜ.25: ಜಾತಿ ಮತ್ತು ಧರ್ಮಾಧರಿತ ರಾಜಕೀಯವು ಇರಬಾರದೆಂದು ನಾನು ಬಯಸುತ್ತೇನೆ. ಆದರೆ ಅದು ಸಾಧ್ಯವಿಲ್ಲ. ಎಲ್ಲಿಯವರೆಗೆ ಜನರು ಧರ್ಮವನ್ನು ಆಧರಿಸಿ ಮತ ಹಾಕುತ್ತಾರೆಯೋ ಅಲ್ಲಿಯವರೆಗೆ ಇದು ಹೀಗೆಯೇ ಮುಂದುವರಿಯಲಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಿಸಿದ್ದಾರೆ.
ಎಲ್ಲಾ ಸರಕಾರಗಳು ಜನರ ಒತ್ತಡಕ್ಕೆ ಮಣಿಯುವುದು ಅನಿವಾರ್ಯ. ಸರಕಾರಗಳು ಕೇವಲ ಒಂದು ಹಂತದವರೆಗೆ ಮಾತ್ರ ಸಮಾಜವನ್ನು ಬದಲಾಯಿಸಬಹುದು. ಸಮಾಜವೇ ಮೊದಲು ಬದಲಾಗಬೇಕು. ಉದಾಹರಣೆಗೆ ಪ್ರಧಾನಿಯವರು ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಅದಕ್ಕೆ ಸಮಾಜದಿಂದಲೇ ವಿರೋಧ ವ್ಯಕ್ತವಾಗುತ್ತದೆ ಎಂದು ಬೋಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾತನಾಡಿದ ಭಾಗವತ್ ತಿಳಿಸಿದ್ದಾರೆ. ಆದರೆ ಭಾರತದಲ್ಲಿ ಪ್ರಜ್ಞಾವಂತ ಸಮಾಜವಿದ್ದು ತನ್ನ ತಪ್ಪಿನಿಂದ ಬೇಗ ಕಲಿತುಕೊಳ್ಳುತ್ತದೆ. ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಚುನಾವಣೆಗಳ ಫಲಿತಾಂಶದಿಂದ ಸಮಾಜವು ಸರಿಯಾದ ಆಯ್ಕೆಯನ್ನು ಮಾಡಲು ಕಲಿತಿದೆ ಎಂಬುದು ತಿಳಿಯುತ್ತದೆ ಎಂದು ಆರೆಸ್ಸೆಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಎಲ್ಲರಿಗೂ ಧಾರ್ಮಿಕ ಹಕ್ಕಿದೆ. ಯಾವ ಧರ್ಮವನ್ನು ಅನುಸರಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಎಲ್ಲಾ ಭಾರತೀಯರಿಗೂ ಒಂದೇ ರೀತಿಯ ಸಿದ್ಧಾಂತವಿದೆ ಎಂದು ಭಾಗವತ್ ವಿವರಿಸಿದ್ದಾರೆ.
ಉದ್ಯಮಪತಿಗಳು ಬಹುಸಂಖ್ಯೆಯಲ್ಲಿ ಹಾಜರಿದ್ದ ಸಭೆಯಲ್ಲಿ ಮಾತನಾಡಿದ ಭಾಗವತ್, ಖಾಸಗಿ ಕ್ಷೇತ್ರವು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಮತ್ತು ಇತರ ಎಲ್ಲಾ ಆರ್ಥಿಕ ಮಾದರಿಗಳು ಸರ್ವಾಧಿಕಾರಿ ಪ್ರವೃತ್ತಿಯನ್ನು ಹೊಂದಿದೆ ಎಂದು ಹೇಳಿದರು. ಜಗತ್ತಿಗೆ ಸೈದ್ಧಾಂತಿಕವಾಗಿ ನಡೆದುಕೊಳ್ಳುವ ಪಾಠ ಮಾಡುವ ಮೂಲಕ ಜಗತ್ತಿನಲ್ಲಿ ಭಾರತವು ತನ್ನ ಕಳೆದುಹೋದ ಸ್ಥಾನವನ್ನು ಮರುಗಳಿಸಬೇಕು ಎಂದವರು ತಿಳಿಸಿದ್ದಾರೆ.
ಭಾರತೀಯ ಸಮಾಜದಲ್ಲಿ ವೈಭವದ ಜೀವನಶೈಲಿಗೆ ಅವಕಾಶವಿಲ್ಲ. ಉದ್ಯಮದಲ್ಲಿ ಬಂದ ಲಾಭವನ್ನು ನಾವು ಉತ್ತಮ ಜೀವನಶೈಲಿ ನಡೆಸಲು ಬಳಸುತ್ತೇವೆ. ಆದರೆ ಉದ್ಯಮದಿಂದ ಬಂದ ಲಾಭವನ್ನು ಸಮಾಜದ ಏಳಿಗೆಗಾಗಿ ಬಳಸಬೇಕೆಂದು ಭಾರತೀಯ ಸಂಸ್ಕೃತಿ ಸೂಚಿಸುತ್ತದೆ ಎಂದು ಭಾಗವತ್ ವಿವರಿಸಿದ್ದಾರೆ.