50 ಜನರಿಗೆ ಪ್ರಧಾನ ಮಂತ್ರಿ ಶ್ರಮ ಪ್ರಶಸ್ತಿ

ಹೊಸದಿಲ್ಲಿ, ಜ.25: 2016ರ ಪ್ರಧಾನ ಮಂತ್ರಿ ಶ್ರಮ ಪ್ರಶಸ್ತಿಗೆ 500 ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ವಿಭಾಗೀಯ, ಖಾಸಗಿ ಅಥವಾ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಂದ ಐವತ್ತು ನೌಕರರನ್ನು ಆಯ್ಕೆ ಮಾಡಲಾಗಿದೆ ಎಂದು ಸರಕಾರ ಗುರುವಾರ ತಿಳಿಸಿದೆ.
ಈ ವರ್ಷ 32 ಶ್ರಮ ಪ್ರಶಸ್ತಿಯನ್ನು ನೀಡಲಾಗುತ್ತಿದ್ದರೂ ಅದನ್ನು ಸ್ವೀಕರಿಸುವವರ ಸಂಖ್ಯೆ 50 ಆಗಿದೆ ಎಂದು ಸರಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಪೈಕಿ 34 ನೌಕರರು ಸಾರ್ವಜನಿಕ ಕ್ಷೇತ್ರಕ್ಕೆ ಸೇರಿದವರಾಗಿದ್ದರೆ 16 ಮಂದಿ ಖಾಸಗಿ ವಲಯದಲ್ಲಿ ದುಡಿಯುವವರಾಗಿದ್ದಾರೆ.
ಶ್ರಮ ಪ್ರಶಸ್ತಿಗಳನ್ನು, ಶ್ರಮ ರತ್ನ, ಶ್ರಮ ಭೂಷಣ, ಶ್ರಮ ವೀರ/ವೀರಾಂಗನೆ ಮತ್ತು ಶ್ರಮ ಶ್ರೀ/ಶ್ರಮ ದೇವಿ ಮುಂತಾದ ವಿಭಾಗಗಳಾಗಿ ನೀಡಲಾಗುತ್ತದೆ. ಕಾರ್ಮಿಕ ಸಚಿವಾಲಯ ನೀಡುವ ಈ ಪ್ರಶಸ್ತಿಯನ್ನು ನೌಕರರ ವಿಶಿಷ್ಟ ನಿರ್ವಹಣೆ, ಸಂಶೋಧನಾ ಸಾಮರ್ಥ್ಯ, ಉತ್ಪಾದನಾ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ಹಾಗೂ ಅಪಾರ ಧೈರ್ಯದ ಮತ್ತು ಸಮಯಪ್ರಜ್ಞೆಯ ಪ್ರದರ್ಶನ ಮುಂತಾದುವುಗಳ ಆಧಾರದಲ್ಲಿ ನೀಡಲಾಗುತ್ತದೆ.
ಈ ವರ್ಷ ಶ್ರಮ ರತ್ನ ಪ್ರಶಸ್ತಿಗೆ ಯಾವುದೇ ಅರ್ಹ ಅರ್ಜಿಗಳು ಬಂದಿಲ್ಲ. ಸೈಲ್, ಬಿಎಚ್‌ಇಎಲ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಯ 12 ನೌಕರರಿಗೆ ಶ್ರಮ ಭೂಷಣ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪದಕವನ್ನು ಹೊಂದಲಿದೆ.
ನೌಕಾ ಬಂದರು, ಟಾಟಾ ಸ್ಟೀಲ್, ಹಿಂಡಾಲ್ಕೊ, ಪ್ರದೀಪ್ ಫೋಸ್ಫೆಟ್ಸ್, ಬ್ರಹ್ಮೋಸ್ ಏರೋಸ್ಪೇಸ್ ಹಾಗೂ ಇತರ ಸಂಸ್ಥೆಗಳಿಗೆ ಸೇರಿದ ಹದಿನೆಂಟು ನೌಕರರನ್ನು ಶ್ರಮ ವೀರ/ಶ್ರಮ ವೀರಾಂಗನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಯು ಪದಕದ ಜೊತೆಗೆ 60,000 ರೂ. ನಗದನ್ನು ಹೊಂದಿದೆ. 20 ನೌಕರರಿಗೆ ಶ್ರಮ ಶ್ರೀ/ಶ್ರಮ ದೇವಿ ಪ್ರಶಸ್ತಿ ನೀಡಲಾಗುವುದ. ಪದಕ ಹಾಗೂ 40,000 ರೂ. ನಗದು ಹೊಂದಿರುವ ಈ ಪ್ರಶಸ್ತಿಯನ್ನು ಭಾರತೀಯ ಸಿಮೆಂಟ್ ಕಾರ್ಪೊರೇಶನ್, ನೇವಲ್ ಶಿಪ್ ರಿಪೇರ್ ಯಾರ್ಡ್, ಟಾಟಾ ಮೋಟರ್ಸ್, ಸೂರತ್ ಲಿಗ್ನೈಟ್ ಪವರ್ ಪ್ಲಾಂಟ್ ಹಾಗೂ ಲಾರ್ಸನ್ ಆ್ಯಂಡ್ ಟುಬ್ರೊದ ನೌಕರರು ಪಡೆದುಕೊಂಡಿದ್ದಾರೆ.