ಮತದಾನದಿಂದ ಪ್ರಜಾಪ್ರಭುತ್ವ ಬಲಗೊಳ್ಳಲಿದೆ: ವಜುಭಾಯಿ ವಾಲಾ

ಬೆಂಗಳೂರು, ಜ.25: ನಿರ್ಭೀತ ಮತ್ತು ಮುಕ್ತ ಮತದಾನದಿಂದ ಮಾತ್ರವೇ ಪ್ರಜಾಪ್ರಭುತ್ವ ಬಲಗೊಳ್ಳಲಿದ್ದು, ಯುವಕರು ಸೇರಿದಂತೆ ಪ್ರತಿಯೊಬ್ಬರೂ ಮತದಾನಕ್ಕೆ ಮುಂದಾಗಬೇಕೆಂದು ರಾಜ್ಯಪಾಲ ವಜುಭಾಯಿವಾಲ ಹೇಳಿದರು.
ಗುರುವಾರ ಭಾರತ ಚುನಾವಣಾ ಆಯೋಗವು ರಾಜಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 18 ವರ್ಷ ತುಂಬಿದ ಯುವಕರು, ವಿಶೇಷವಾಗಿ ವಿಕಲಚೇತನರು, ಮಹಿಳೆಯರು ಹಾಗೂ ಅಲಕ್ಷಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಹಾಗೂ ಮತದಾನ ಮಾಡುವಂತೆ ಪ್ರೇರೇಪಿಸುವುದು ಅಗತ್ಯವಿದೆ ಎಂದು ತಿಳಿಸಿದರು.
ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲಾ ನಾಗರಿಕರು, ರಾಷ್ಟ್ರೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚುನಾವಣೆಯಲ್ಲಿ ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ನಿರ್ಭೀತಿಯಿಂದ ಮತ ಚಲಾಯಿಸುವಂತಾಗಬೇಕು. ಜನರೋಧಿ ಸರಕಾರವನ್ನು ಮತದಾನದ ಮೂಲಕವೇ ಸ್ಥಾಪಿಸುವ ಮತ್ತು ಕಿತ್ತೆಸೆಯುವ ಅಧಿಕಾರವನ್ನು ಮತದಾರರು ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಮಾತನಾಡಿ, ಚುನಾವಣಾ ಆಯೋಗವು ಜ.25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಮತಗಟ್ಟೆ, ತಾಲೂಕು, ಜಿಲ್ಲಾ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ಸಹ ಆಚರಿಸಲಾಗುತ್ತಿದೆ. ಮುಕ್ತ, ನ್ಯಾಯ ಸಮ್ಮತವಾದ ಹಾಗೂ ಪಾರದರ್ಶಕ ಮತದಾನವೇ ಚುನಾವಣೆ ಆಯೋಗದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ದಿನಾಚರಣೆಯ ಪೂರ್ವಭಾವಿಯಾಗಿ ಮತಗಟ್ಟೆ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಹಲವಾರು ಜನಜಾಗೃತಿ ಕಾರ್ಯಕ್ರಮ, ಶಾಲಾ-ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ, ಭಿತ್ತಿಪತ್ರಗಳ ರಚನೆ, ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತಿದೆ ಎಂದರು.
ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಬಿಬಿಎಂಪಿಯ ಬೂತ್ ಮಟ್ಟದಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದ 21 ಅಧಿಕಾರಿಗಳಿಗೆ ಉತ್ತಮ ಮತಗಟ್ಟೆ ಅಧಿಕಾರಿಗಳೆಂದು ಬಹುಮಾನ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಪಾಲರು ವಿಶೇಷ ವಿಕಲಚೇತನರಿಗೆ ಸಾಂಕೇತಿಕವಾಗಿ ಮತದಾನದ ಚೀಟಿಯನ್ನು ವಿತರಿಸಿದರು. ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಂಕರ್, ಅಪರ ಜಿಲ್ಲಾಧಿಕಾರಿ ನಾಗರಾಜ್ ಮತ್ತಿತರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.







