ಜಾಗೃತ ಮತದಾರರಿಂದ ಪ್ರಜಾಪ್ರಭುತ್ವದ ಉಳಿವು: ವೆಂಕಟೇಶ್ ನಾಯ್ಕ

ಉಡುಪಿ, ಜ.25: ಮುಕ್ತ ಹಾಗೂ ನಿರ್ಭೀತ ಚುನಾವಣೆ ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣ. ಹಾಗೂ ಜಾಗೃತ ಮತದಾರರಿಂದ ಪ್ರಜಾಪ್ರಭುತ್ವ ಉಳಿಯುವುದು. ಇದರಿಂದ ರಾಷ್ಟ್ರದ ಪ್ರತಿಷ್ಠೆ ಮತ್ತು ಮೌಲ್ಯ ಹೆಚ್ಚುವುದು ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕಾ ಟಿ. ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಎಂಜಿಎಂ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇಂದು ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದಲ್ಲಿ ಪರಮಾಧಿಕಾರ ಇರುವುದು ಜನರ ಕೈಯಲ್ಲಿ. ಇದರ ಅಭಿವ್ಯಕ್ತಿಗೆ ಚುನಾವಣೆಯೇ ಪ್ರಧಾನ ಅಸ್ತ್ರ. ಈ ಕಾರಣದಿಂದ ಮತದಾನದ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸರಕಾರ ನಡೆಸುವ ಗುರುತರ ಹೊಣೆಗಾರಿಕೆ ಜನತೆಯ ಮೇಲಿದೆ. ಪ್ರಜೆಗಳ ಮತವನ್ನು ಸ್ವೀಕರಿಸಿ ಅದಕ್ಕೆ ಪೂರಕವಾಗಿ ಸರಕಾರ ನಡೆಸಬೇಕೆಂಬುವುದು ಪ್ರಜಾಪ್ರುತ್ವದ ಮುಖ್ಯ ಆಶಯ ಎಂದು ವೆಂಕಟೇಶ್ ನಾಯ್ಕೆ ಹೇಳಿದರು.
ಜನವಿರೋಧಿಯಾದ ಸರಕಾರವನ್ನು ಮತದಾನದ ಮೂಲಕವೇ ಕಿತ್ತೆಸೆಯುವ ಅಧಿಕಾರವೂ ಜನರಿಗಿದೆ. ಸರಕಾರವನ್ನು ಸ್ಥಾಪಿಸುವ ಮತ್ತು ಅಸಮರ್ಥ ಸರಕಾರ ವನ್ನು ಕಿತ್ತೆಸೆಯುವ ಅಧಿಕಾರವನ್ನು ಕೂಡ ಚುನಾವಣೆ ಹೊಂದಿದೆ. ಆಸ್ಟ್ರೇಲಿಯಾ ದಂತಹ ದೇಶದಲ್ಲಿ ಮತದಾನ ಮಾಡದಿರುವುದು ಅಪರಾಧ ವಾಗುತ್ತದೆ. ಆದರೆ ಭಾರತ ದೇಶದಲ್ಲಿ ಪ್ರಜಾಪ್ರುತ್ವ ವ್ಯವಸ್ಥೆಯಲ್ಲಿ ಮತದಾನ ಕಡ್ಡಾಯ ಗೊಳಿಸುವುದು ಕಷ್ಟಸಾದ್ಯ. ಹೀಗಾಗಿ ಇಲ್ಲಿ ದಂಡನೆಗಿಂತ ಜಾಗೃತಿಗೆ ಹೆಚ್ಚಿನ ಮಹತ್ವ. ಜಾಗೃತಿಯ ಮೂಲಕ ಜನರಲ್ಲಿ ಅರಿವನ್ನು ಮೂಡಿಸಿ ಎಲ್ಲರೂ ಮತದಾನ ವಾಡಲು ಪ್ರೇರೇಪಿಸಬೇಕು ಎಂದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಮಾತನಾಡಿ, ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿದರೆ ಉತ್ತಮ ಸರಕಾರವನ್ನು ಆಡಳಿತಕ್ಕೇರಿಸ ಬಹುದು. ಯಾರೇ ಆಡಳಿತ ನಡೆಸಲು ಮತದಾನದ ಮೂಲಕವೇ ಬರಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಎಲ್ಲ ವರ್ಗದವರು ವಿಶೇಷವಾಗಿ ವಿಕಲಚೇತನರು ಮತದಾನ ಮಾಡಲು ಸಹಾಯವಾಗುವಂತೆ ಈ ಬಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ 2000ವರ್ಷದ ಜ.1ರಂದು ಜನಿಸಿ ಈ ವರ್ಷ 18 ಪೂರ್ಣಗೊಂಡು ‘ಮಿಲೇನಿಯಂ ಮತದಾರ’ರೆಂದು ಗುರುತಿಸಲಾದ ಎಂಟು ಮಂದಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿಶೇಷ ಗುರುತು ಚೀಟಿ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ವೀಪ್‌ನಡಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಶ್ರೇಯಸ್ ಕೋಟ್ಯಾನ್‌ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಮತದಾನದ ಪ್ರತಿಜ್ಞಾ ವಿಧಿಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕಾಪಶಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಸಂಧ್ಯಾ ನಂಬಿಯಾರ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು, ಉಡುಪಿ ತಹಶೀಲ್ದಾರ ಪ್ರದೀಪ್ ಕುರ್ಡೇಕರ್ ವಂದಿಸಿದರು. ಎಂ.ಜಿ.ಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ನಿರೂಪಿಸಿದರು.







