ಫೆಬ್ರವರಿಯಲ್ಲಿ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಜ.25: ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಮೊದಲ ಹಂತದಲ್ಲಿ 150 ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಗುರುವಾರ ಜೆಡಿಎಸ್ ಕಚೇರಿಯಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಜೆಡಿಎಸ್ ಸಕಲ ರೀತಿಯಲ್ಲಿ ತಯಾರಿ ನಡೆಸಿಕೊಂಡಿದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಬೃಹತ್ ಸಮಾವೇಶ: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಯಾವ ರೀತಿಯ ಸಂದೇಶವನ್ನು ನೀಡಲಿದ್ದಾರೆ ಎಂದು ಕಾಯುತ್ತಿದ್ದೇನೆ. ಅವರು ಬಂದು ಹೋದ ಬಳಿಕ ಜೆಡಿಎಸ್ ವತಿಯಿಂದ ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದೆ. ಇದೇ ಸಂದರ್ಭದಲ್ಲಿ 150 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜೆಡಿಎಸ್ ಮೊದಲ ಹಂತದಲ್ಲಿ 150 ಅಭ್ಯರ್ಥಿಗಳಿಗೆ ಈಗಾಗಲೆ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಮನೆಗೂ ಜೆಡಿಎಸ್ ಸಿದ್ಧಾಂತವನ್ನು ತಲುಪಿಸುವುದು ಹೇಗೆ ಎಂಬುದನ್ನು ಚರ್ಚಿಸಲಾಗಿದೆ. ಮುಂದಿನ ಮಾರ್ಚ್ ಒಳಗೆ ರಾಜ್ಯದ ಪ್ರತಿ ಗ್ರಾಮಕ್ಕೂ ಜೆಡಿಎಸ್ ಚುನಾವಣಾ ರ್ಯಾಲಿ ತಲುಪಲಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯವಿಲ್ಲವೆಂದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಬೆಳಗಾವಿಯ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಜೆಡಿಎಸ್‌ನತ್ತ ಬರುತ್ತಿದ್ದಾರೆ. ಅವರೆಲ್ಲರ ಬರುವಿಕೆಯಿಂದ ಜೆಡಿಎಸ್ ಮತ್ತಷ್ಟು ಬಲಿಷ್ಠವಾಗಲಿದೆ.
-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ50ಕ್ಕೂ ಹೆಚ್ಚು ಮುಖಂಡರು ಜೆಡಿಎಸ್‌ಗೆ :ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್, ಎಪಿಎಂಸಿಯ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ್, ಬಸವರಾಜ್ ಮೇಳೇದ್, ದ್ಯಾಮನಗೌಡ ಬಿ ಪಾಟೀಲ್, ಸುರೇಶ್ ಗಜಪತಿ, ಹನುಮಂತಪ್ಪ ಅಲಾಬಾದಿ, ಸಿದ್ದಯ್ಯ ಪೂಜಾರಿ, ನಾಗಪ್ಪ ಕಳವಟ್ಟಿ, ದರಿಗೌಡ ಪಾಟೀಲ್, ಮಲ್ಲಗೌಡ ಮೇಳೇದ್, ಬಸವರಾಜ ಸಿಂಗಾಡಿ ಸೇರಿದಂತೆ 50ಕ್ಕೂ ಹೆಚ್ಚು ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು.







