ಮಹಾದಾಯಿ ವಿಷಯ ಪ್ರಸ್ತಾಪಿಸದ ಅಮಿತ್ ಶಾ: ಸಿ.ಎಂ ಸಿದ್ದರಾಮಯ್ಯ ಆಕ್ರೋಶ
"ಅವರು ಹುಲಿ-ಸಿಂಹಗಳಾದರೆ, ಇಲ್ಲಿನ ಬಿಜೆಪಿ ನಾಯಕರು ನರಿಗಳೇ?"

ಬೆಂಗಳೂರು, ಜ. 25: ಮಹಾದಾಯಿ ವಿಚಾರವಾಗಿ ‘ಕರ್ನಾಟಕ ಬಂದ್’ ನಡೆಯುತ್ತಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಆ ವಿಷಯವನ್ನೇ ಪ್ರಸ್ತಾಪ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಹಾದಾಯಿ ಬಿಕ್ಕಟ್ಟಿಗೆ ಪರಿಹಾರ ಕೊಡಿಸದ ಹೊರತು ಬಿಜೆಪಿ ರಾಷ್ಟ್ರೀಯ ನಾಯಕರು ಇಲ್ಲಿಗೆ ಬಂದು ಭಾಷಣ ಮಾಡಲು ಯಾವುದೇ ನೈತಿಕೆ ಇರುವುದಿಲ್ಲ ಎಂದು ತಿಳಿಸಿದರು.
ಸಮಾವೇಶಕ್ಕೆ ಬಂದು ಅಮಿತ್ ಶಾ ಅವರು ಸುಳ್ಳುಗಳನ್ನು ಹೇಳಿ ಹೋಗುವುದಲ್ಲ. ಮಹಾದಾಯಿ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಯವರ ಮೇಲೆ ಒತ್ತಡ ಹೇರಲಿ. ಆಗ ಇಲ್ಲಿಗೆ ಬಂದು ಮಾತನಾಡಲು ನೈತಿಕತೆ ಇರುತ್ತದೆ ಎಂದು ಸಿದ್ದರಾಮಯ್ಯ, ಬಿಜೆಪಿ ಮುಖಂಡರಿಗೆ ಸೂಚಿಸಿದರು.
ಪ್ರಧಾನಿ ಮೋದಿಯವರು ಫೆ.4ರಂದು ಕರ್ನಾಟಕಕ್ಕೆ ಬರುತ್ತಿದ್ದಾರೆ. ಮಹಾದಾಯಿ ವಿವಾದ ಬಗೆಹರಿಸಲು ನಾನು ಮಧ್ಯಸ್ಥಿಕೆ ವಹಿಸುತ್ತೇನೆ. ಬಿಕ್ಕಟ್ಟು ಪರಿಹರಿಸುತ್ತೇನೆ ಎಂದು ಅವರು ಬಂದಾಗ ಘೋಷಣೆ ಮಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಮಹಾದಾಯಿ ನದಿ ನೀರಿಗಾಗಿ ಎರಡು ವರ್ಷದಿಂದ ಹೋರಾಟ ನಡೆಯುತ್ತಿದೆ. ಪರಿವರ್ತನಾ ಯಾತ್ರೆಯಲ್ಲಿ ಅದರ ಬಗ್ಗೆ ಅಮಿತ್ ಶಾ ಮಾತನಾಡುವುದನ್ನು ಬಿಟ್ಟು ಸುಳ್ಳುಗಳ ಸರಮಾಲೆ ಜೋಡಿಸಿ ಹೋಗಿದ್ದಾರೆ. ಅನುದಾನ ಹೆಚ್ಚು ಕೊಟ್ಟಿದ್ದೇವೆ ಎಂದು ಬಂದಾಗಲೆಲ್ಲ ಅವರು ಹೇಳುತ್ತಾರೆ. ಹಣಕಾಸು ಆಯೋಗ ಶಿಫಾರಸು ಪ್ರಕಾರ ಅನುದಾನ ಕೊಡುವುದೇ ಹೊರತು ಇದರಲ್ಲಿ ಕೇಂದ್ರದ ಹೆಚ್ವುಗಾರಿಕೆ ಏನಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಇಲ್ಲಿನ ನಾಯಕರು ನರಿಗಳೇ ?: ಈಗ ಹುಲಿ(ಅಮಿತ್ ಶಾ)ಬಂದಿದೆ. ಫೆ.4ಕ್ಕೆ ಸಿಂಹ (ಪ್ರಧಾನಿ ಮೋದಿ) ಬರಲಿದೆ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಮಿತ್ ಶಾ ಮತ್ತು ಮೋದಿ ಹುಲಿ-ಸಿಂಹವಾದರೆ ಆ ಪಕ್ಷದ ರಾಜ್ಯ ನಾಯಕರು ನರಿಗಳೇ ಎಂದು ಪ್ರಶ್ನಿಸಿದರು.







