‘ಮೇಕ್ ಇನ್ ಇಂಡಿಯಾ’ವನ್ನು ಉದ್ಯಮ ರಕ್ಷಣಾ ಕ್ರಮ ಎನ್ನುವಂತಿಲ್ಲ: ಕೇಂದ್ರ ಸಚಿವ ಗೋಯಲ್

ಡಾವೋಸ್,ಜ.25: ಅಮೆರಿಕ ಮತ್ತು ಇತರ ಕೆಲವು ದೇಶಗಳು ಜಾರಿಗೊಳಿಸಿರುವ ಉದ್ಯಮ ರಕ್ಷಣಾ ಕ್ರಮಗಳ ಬಗ್ಗೆ ಜಾಗತಿಕ ನಾಯಕರು ಕಳವಳಗಳನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ‘ಮೇಕ್ ಇನ್ ಇಂಡಿಯಾ’ವನ್ನು ಉದ್ಯಮ ರಕ್ಷಣಾ ಕ್ರಮ ಎನ್ನುವಂತಿಲ್ಲ ಮತ್ತು ಭಾರತವು ತನ್ನ ಸಮೃದ್ಧಿಯನ್ನು ವಿಶ್ವದ ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳಲು ಬಯಸಿದೆ ಎಂದು ಹೇಳಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಗೋಯಲ್, ಭಿನ್ನಗೊಂಡ ಜಗತ್ತಿಗೆ ಸಂಬಂಧಿಸಿದ ಪ್ರಚಲಿತ ಕಳವಳಗಳ ಸಂದರ್ಭದಲ್ಲಿ ಭಾರತವು ತನ್ನನ್ನು ಜಾಗತಿಕ ಮುತ್ಸದ್ದಿಯನ್ನಾಗಿ ಗುರುತಿಸಿಕೊಂಡಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಭಾರತವು ತನ್ನ ಸಮೃದ್ಧಿಯನ್ನು ಇತರ ಜಗತ್ತಿನೊಂದಿಗೆ ಹಂಚಿಕೊಳ್ಳುವ ನೀತಿಯನ್ನು ಸದಾ ನಂಬಿಕೊಂಡು ಬಂದಿದೆ. ‘ವಸುಧೈವ ಕುಟುಂಬಕಂ’ ಎನ್ನುವುದು ಅನಾದಿಕಾಲದಿಂದಲೂ ನಮ್ಮ ಸಿದ್ಧಾಂತವಾಗಿದೆ ಎಂದ ಅವರು, ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಸ್ಪರ್ಧಾತ್ಮಕ ಪ್ರಯೋಜನಗಳನ್ನು ಹೊಂದಿದೆ. ಉದ್ಯಮವನ್ನು ನಡೆಸಲು ಅದು ಅತ್ಯಂತ ಆಕರ್ಷಕ ತಾಣವಾಗಿದೆ ಮತ್ತು ಬಹುದೊಡ್ಡ ಮಾರುಕಟ್ಟೆಯಾಗಿದೆ. ‘ಮೇಕ್ ಇನ್ ಇಂಡಿಯಾ’ದ ಬಗ್ಗೆ ಮಾತನಾಡುವಾಗ ನಾವು ಇದನ್ನೇ ಹೇಳುತ್ತೇವೆ. ಆದ್ದರಿಂದ ಈ ಕಾರ್ಯಕ್ರಮವು ಉದ್ಯಮ ರಕ್ಷಣಾ ಕ್ರಮವಲ್ಲ. ಬದಲಿಗೆ ಅದು ವಿಶ್ವದ ಎಲ್ಲ ಜನರಿಗೆ ಸೇವೆ ಸಲ್ಲಿಸಲು ಅತ್ಯುತ್ತಮ ಪ್ರತಿಭೆ, ಬೆಲೆ ಮತ್ತು ತಂತ್ರಜ್ಞಾನವನ್ನು ಪಡೆದುಕೊಳ್ಳುವ ಅವಕಾಶವಾಗಿದೆ ಎಂದು ಹೇಳಿದರು.
ಸಾಗರೋತ್ತರ ಉದ್ಯೋಗಗಳನ್ನು ಮತ್ತು ಲಾಭಗಳನ್ನು ಅಮೆರಿಕಕ್ಕೆ ವಾಪಸ್ ತರುವಂತೆ ಉನ್ನತ ಕಂಪನಿಗಳಿಗೆ ಸೂಚಿಸಿರುವ ‘ಅಮೆರಿಕಾ ಫಸ್ಟ್’ ಕಾರ್ಯಕ್ರಮ ಕುರಿತು ಪ್ರಶ್ನೆಗೆ ಉತ್ತರಿಸಿದ ಗೋಯಲ್, ಭಾರತವು ಹಾಗೆ ಎಂದೂ ಮಾಡಿಲ್ಲ ಮತ್ತು ಪ್ರಗತಿ ಹಾಗೂ ಸಮೃದ್ಧಿಯನ್ನು ಎಲ್ಲ ಪಾಲುದಾರರೊಂದಿಗೆ ಹಂಚಿಕೊಳ್ಳುವುದರಲ್ಲಿ ನಂಬಿಕೆಯನ್ನು ಹೊಂದಿದೆ. ವಿಶ್ವವ್ಯಾಪಿ ಆದಾಯದ ಮೇಲೆ ನಾವು ತೆರಿಗೆಯನ್ನು ವಿಧಿಸಿಲ್ಲ. ವಿಶ್ವದ ಹಲವು ರಾಷ್ಟ್ರಗಳು ಜಾರಿಗೊಳಿಸಿರುವ ಬಂಡವಾಳ ಹರಿವಿನ ನಿರ್ಬಂಧಗಳು ನಮ್ಮಲ್ಲಿಲ್ಲ. ಈ ಅರ್ಥದಲ್ಲಿ ನಮ್ಮದು ಅತ್ಯಂತ ಉದಾರ ಮತ್ತು ಹೂಡಿಕೆಗೆ ಅತ್ಯಂತ ಆಕರ್ಷಕ ಆರ್ಥಿಕತೆಯಾಗಿದೆ ಎಂದರು.







