ಫೆ.5ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ: ಫೆ.16ಕ್ಕೆ ಬಜೆಟ್ ಮಂಡನೆ

ಬೆಂಗಳೂರು, ಜ. 25: ಮುಂಬರುವ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ನಡೆಯಲಿರುವ ವಿಧಾನ ಮಂಡಲ ಜಂಟಿ ಅಧಿವೇಶನ ಫೆ.5ರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಮಾಡಲಿದ್ದಾರೆ.
ಫೆ.9ರ ವರೆಗೆ ಒಟ್ಟು ಐದು ದಿನಗಳ ಕಾಲ ವಿಧಾನ ಮಂಡಲ ಕಲಾಪ ಜರುಗಲಿದ್ದು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಪ್ರಸ್ತಾಪಿಸಲಿದ್ದು, ಈ ಬಗ್ಗೆ ಸರಕಾರ ಉತ್ತರ ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಫೆ.16ಕ್ಕೆ ಬಜೆಟ್ ಅಧಿವೇಶನ: ಫೆ.16ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಂದು ಬೆಳಗ್ಗೆ 11:30ಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2018-19ನೆ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆ.
ಫೆ.17 ಮತ್ತು 18ರಂದು (ಶನಿವಾರ ಮತ್ತು ರವಿವಾರ) ಕಲಾಪ ಇರುವುದಿಲ್ಲ. ಫೆ.28ರ ವರೆಗೆ ಅಧಿವೇಶನ ಕಲಾಪ ಜರುಗಲಿದ್ದು, ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಜೆಟ್ ಕಲಾಪ ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆದುಕೊಂಡಿದೆ.





