ಫೆ.10 ರಂದು ಮಶೀನ್ ಟೂಲ್ಸ್ ಪಾರ್ಕ್‌ಗೆ ಶಂಕುಸ್ಥಾಪನೆ: ಸಚಿವ ದೇಶಪಾಂಡೆ
ಇಮ್ಟೆಕ್ಸ್-2018 ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು, ಜ. 25: ದೇಶದಲ್ಲಿ ಮಶೀನ್ ಟೂಲ್ಸ್ (ಯಂತ್ರೋಪಕರಣಗಳು) ಉತ್ಪಾದನೆಯಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದ್ದು, ಫೆ.10ಕ್ಕೆ ತುಮಕೂರಿನಲ್ಲಿ ಮಶೀನ್ ಟೂಲ್ಸ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್.ವಿ.ದೇಶಪಾಂಡೆ ಘೋಷಿಸಿದ್ದಾರೆ.
ಗುರುವಾರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಭಾರತೀಯ ಮಶೀನ್ ಟೂಲ್ಸ್ ಉತ್ಪಾದಕರ ಒಕ್ಕೂಟ ಏರ್ಪಡಿಸಿರುವ ಇಮ್ಟೆಕ್ಸ್ ಟೂಲ್‌ಟೆಕ್-2018 ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ದೇಶದ ಯಂತ್ರೋಪಕರಣಗಳ ಒಟ್ಟು ಉತ್ಪಾದನೆಯಲ್ಲಿ ಶೇ.60ರಷ್ಟು ಬೆಂಗಳೂರು ನಗರವೊಂದರಲ್ಲೇ ತಯಾರಾಗುತ್ತಿವೆ. ವಿಶೇಷ ಉದ್ದೇಶದ ಯಂತ್ರೋಪಕರಣಗಳು (ಸ್ಪೆಷಲ್ ಪರ್ಪಸ್ ಮಶಿನರಿ) ಮತ್ತು ಭಾರೀ ವಿದ್ಯುತ್ ಯಂತ್ರೋಪಕರಣಗಳನ್ನು (ಹೆವಿ ಎಲೆಕ್ಟ್ರಿಕಲ್ ಮಶಿನರಿ) ಉತ್ಪಾದಿಸುವುದರಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ದೇಶಪಾಂಡೆ ಹೇಳಿದರು.
ವಿಶೇಷ ಉದ್ದೇಶದ ಯಂತ್ರೋಪಕರಣಗಳ ತಯಾರಿಕೆಯಲ್ಲಿ ರಾಜ್ಯವು ಜಗತ್ತಿನ ಐದು ಮುಂಚೂಣಿ ತಾಣಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಪರಿಣತಿ ಸಾಧಿಸಿರುವ 120 ಕಂಪೆನಿಗಳು ನೆಲೆ ಹೊಂದಿವೆ. ರಾಜ್ಯದ ಕೈಗಾರಿಕಾ ನೀತಿಯಡಿ ಈ ವಲಯದಲ್ಲಿ 500 ಕೋಟಿ ರೂ.ನಿಂದ 1 ಸಾವಿರ ಕೋಟಿ ರೂ.ಮತ್ತು ಇದಕ್ಕಿಂತ ಹೆಚ್ಚಿನ ಬಂಡವಾಳ ಹೊಂದಿರುವ ಅಲ್ಟ್ರಾ ಮೆಗಾ ಮತ್ತು ಸೂಪರ್ ಮೆಗಾ ಕಂಪೆನಿಗಳಿಗೆ ವಿಶೇಷ ಪ್ರೋತ್ಸಾಹ ಕೊಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಜಗತ್ತಿನ ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಮುನ್ನಡೆಸುವ ಸಾಮರ್ಥ್ಯ ರಾಜ್ಯಕ್ಕಿದೆ. ಉದ್ಯಮ ರಂಗವನ್ನು ಡಿಜಿಟಲೀಕರಣಗೊಳಿಸಲು ಬಿಗ್‌ಡೇಟಾ, ಹೈ-ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (ಆರ್ಟಿಫಿಯಲ್ ಇಂಟೆಲಿಜೆನ್ಸ್) ಮತ್ತು ಅನಲೆಟಿಕ್ಸ್‌ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಉದ್ಯಮಗಳಿಗೆ ಉತ್ತೇಜನ ನೀಡುವ ವಿಚಾರದಲ್ಲಿ ರಾಜ್ಯ ತೆಗೆದುಕೊಂಡಿರುವ ತೀರ್ಮಾನಗಳನ್ನು ಕೇಂದ್ರ ಸರಕಾರವೂ ಅನುಸರಿಸುತ್ತಿದೆ ಎಂದು ಅವರು ನುಡಿದರು.
ಜಾಗತೀಕರಣದ ಯುಗದಲ್ಲಿ ಗುಣಮಟ್ಟ, ಮಿತವ್ಯಯ ಮತ್ತು ಕ್ಷಿಪ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಂಶಗಳು ಅತ್ಯಂತ ನಿರ್ಣಾಯಕ. ಇವೆಲ್ಲವೂ ಇದ್ದಾಗ ಮಾತ್ರ ಗ್ರಾಹಕನನ್ನು ಸಂತೃಪ್ತಿ ಪಡೆಸಲು ಸಾಧ್ಯ. ಇದರ ಜೊತೆಗೆ, ಉದ್ಯಮಿಗಳು ಸ್ಪರ್ಧಾತ್ಮಕ ವಾತಾವರಣವದಲ್ಲಿ ನಂಬಿಕೆ ಇಟ್ಟು ಮುನ್ನುಗ್ಗಬೇಕು ಎಂದು ದೇಶಪಾಂಡೆ ಸೂಚಿಸಿದರು.
ಪೂರೈಕೆಯ ಸರಪಳಿಯನ್ನು ನಾವು ಮತ್ತಷ್ಟು ಬಲಪಡಿಸಬೇಕಾಗಿದೆ. ಇನ್ನೊಂದೆಡೆ, ಐಟಿ-ಬಿಟಿ ವಲಯದಲ್ಲಿ ನಾವು ಕೇವಲ ಸೇವಾ ಪೂರೈಕೆದಾರರಾಗಿಯೇ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಯಂತ್ರೋಪಕರಣ ತಯಾರಿಕೆ ಸೇರಿದಂತೆ ಎಲ್ಲ ವಲಯಗಳೂ ಸಂಶೋಧನೆಯ ಕಡೆಗೆ ದಾಪುಗಾಲಿಡಬೇಕು ಎಂದು ಅವರು ಹೇಳಿದರು.
ಕೈಗಾರಿಕೆಗಳನ್ನು ಮತ್ತು ಬಂಡವಾಳ ಹೂಡಿಕೆಯನ್ನು ನಾವು ಸದಾ ಸ್ವಾಗತಿಸುತ್ತೇವೆ. ಆದರೆ, ಉದ್ಯಮಗಳು ತಮ್ಮ ಲಾಭಾಂಶದ ಪಾಲನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ಈ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಂಡು, ಯುವಜನರಿಗೆ ಉದ್ಯೋಗ ಕೊಡುವುದು ಅತ್ಯಗತ್ಯ ಎಂದು ದೇಶಪಾಂಡೆ ಸೂಚಿಸಿದರು.
1990ರ ಆರಂಭದಲ್ಲಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಹಣಕಾಸು ಸಚಿವ ಮನಮೋಹನ್ ಸಿಂಗ್ ದೇಶದಲ್ಲಿ ಉದಾರ ಆರ್ಥಿಕ ನೀತಿಯನ್ನು ಜಾರಿಗೆ ತರುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದರು. ಭಾರತ ಇಂದು ಕಂಡಿರುವ ಅಗಾಧ ಬೆಳವಣಿಗೆಗೆ ಇವರಿಬ್ಬರೂ ಮೂಲಪುರುಷರು ಎನ್ನುವುದನ್ನು ನಾವು ಮರೆಯಬಾರದು. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಈಗ ಹಿಮ್ಮುಖವಾಗಿ ಚಲಿಸುವುದು ಸಾಧ್ಯವಿಲ್ಲ ಎಂದು ನೆನಪಿಸಿಕೊಂಡರು.
ಸಮಾರಂಭದಲ್ಲಿ ಇಸ್ರೊದ ನಿವೃತ್ತ ಮುಖ್ಯಸ್ಥ ಡಾ.ಎ.ಎಸ್.ಕಿರಣ್‌ಕುಮಾರ್, ಐಎಂಟಿಎಂಎ ಪದಾಧಿಕಾರಿಗಳಾದ ಜಮ್‌ಷೆಡ್ ಗೋದ್ರೇಜ್, ಪಿ.ರಾಮದಾಸ್, ಎಸಿಎಂಎಐ ಅಧ್ಯಕ್ಷ ನಿರ್ಮಲ್ ಮಿಂದಾ, ಉಪಾಧ್ಯಕ್ಷ ಇಂದ್ರದೇವ್ ಬಾಬು ಉಪಸ್ಥಿತರಿದ್ದರು.







