110 ಹಳ್ಳಿಗಳ ನೀರು ಪೂರೈಕೆಗೆ ‘ಜೈಕೋ’ದಿಂದ 2,500ಕೋಟಿ ರೂ. ನೆರವು: ಸಕಾಮೋಟೊ

ಬೆಂಗಳೂರು, ಫೆ. 25: ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ(ಜೈಕಾ)ಯಿಂದ 2,500 ಕೋಟಿ ರೂ.ನೆರವು ನೀಡಲಾಗಿದೆ ಎಂದು ಜೈಕಾ ಪ್ರಧಾನ ಪ್ರತಿನಿಧಿ ಟಕೇಮಾ ಸಕಾಮೋಟೊ ತಿಳಿಸಿದ್ದಾರೆ.
ಬಿಬಿಎಂಪಿ ಪ್ರದೇಶಗಳಿಗೆ ದಿನದ 24 ಗಂಟೆಗಳು ನಿರಂತರ ನೀರು ಪೂರೈಕೆ ಮತ್ತು ಇತ್ತೀಚೆಗೆ ಬಿಬಿಎಂಪಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ನೀರು ಒದಗಿಸಲು ಹಾಗೂ 1 ನೀರು ಸಂಸ್ಕರಣ ಘಟಕ, 14 ಒಳಚರಂಡಿ ನೀರು ಸಂಸ್ಕರಣ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಯೋಜನೆಯಡಿ ಬೆಂಗಳೂರಿನ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಬಹಳಷ್ಟು ಸುಧಾರಿಸುತ್ತದೆ. ಜೆಐಸಿಎ ಒಟ್ಟು ನೆರವು ರಾಜಧಾನಿ ನಗರದ ಅರ್ಧದಷ್ಟು ಜನರಿಗೆ ಲಾಭ ತರಲಿದೆ. ಈ ಯೋಜನೆ ಅನುಷ್ಠಾನದಿಂದ ಬೆಂಗಳೂರಿನ ನೀರು, ನೈರ್ಮಲ್ಯ, ಬದುಕಿನ ಸ್ಥಿತಿಗತಿಗಳು ಸುಧಾರಿಸಲಿದ್ದು, ಇಡೀ ದೇಶಕ್ಕೆ ಬೆಂಗಳೂರು ಮಾದರಿಯಾಗಲಿದೆ ಎಂದು ಅವರು ತಿಳಿಸಿದರು.
1988ರಿಂದ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಕ್ಕೆ ಜೈಕಾ ಈವರೆಗೂ ಒಟ್ಟು 16 ಸಾವಿರ ಕೋಟಿ ರೂ. ಸಾಲದ ರೂಪದಲ್ಲಿ ನೆರವು ನೀಡಿದ್ದು, ನಮ್ಮ ಮೆಟ್ರೋ, ವಿದ್ಯುತ್ ವಿತರಣೆ, ಕೃಷಿ, ಅರಣ್ಯ ಸೇರಿದಂತೆ ವಿವಿಧ ಯೋಜನೆಗಳಿಗೆ ಸಹಾಯ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಜೈಕಾ ಜಪಾನಿನ ಖಾಸಗಿ ಕಂಪೆನಿಗಳಿಗೂ ಬೆಂಗಳೂರಿನ ಅಭಿವೃದ್ಧಿಗೆ ನೆರವು ನೀಡುವಂತೆ ಕೋರಿದ್ದು, ತಂತ್ರಜ್ಞಾನವನ್ನು ಹಂಚಿಕೊಳ್ಳಲಿದೆ ಎಂದಿರುವ ಅವರು, ಉಭಯ ರಾಷ್ಟ್ರಗಳ ನಡುವಣ ಸ್ನೇಹ-ಸಂಬಂಧಗಳನ್ನು ಬಲಪಡಿಸಲು ಜೈಕಾ, ಜಪಾನಿ ಯುವಜನರನ್ನು ಸ್ವಯಂಸೇವಕರನ್ನಾಗಿ ಭಾರತಕ್ಕೆ ಕಳುಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.







