‘ಪದ್ಮಾವತ್’ ಬಿಡುಗಡೆ: ರಾಷ್ಟ್ರಾದ್ಯಂತ ತೀವ್ರ ಪ್ರತಿಭಟನೆ

ಹೊಸದಿಲ್ಲಿ, ಜ. 25: ಸಂಜಯ್ ಲೀಲಾ ಬನ್ಸಾಲಿ ಅವರ ವಿವಾದಾತ್ಮಕ ಚಲನಚಿತ್ರ ‘ಪದ್ಮಾವತ್’ ಗುರುವಾರ ಬಿಡುಗಡೆಗೊಂಡಿದ್ದು, ಪ್ರಮುಖ ನಾಲ್ಕು ರಾಜ್ಯಗಳು ಸೇರಿದಂತೆ ರಾಷ್ಟ್ರಾದ್ಯಂತ ಪ್ರತಿಭಟನೆ ಹಾಗೂ ಹಿಂಸಾಚಾರ ಮುಂದುವರಿದಿದೆ.
ಹಲವು ರಾಜ್ಯಗಳಲ್ಲಿ ಪೊಲೀಸರು ಕಠಿಣ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ರಾಜಸ್ಥಾನ ಹಾಗೂ ಉತ್ತರಾಖಂಡದಲ್ಲೂ ಗುರುವಾರ ಪ್ರತಿಭಟನೆ ನಡೆಯಿತು. ಜೈಪುರದಲ್ಲಿ ಕರ್ಣಿ ಸೇನೆ ಬೈಕ್ ರ್ಯಾಲಿ ನಡೆಸಿತು. ಪ್ರತಿಭಟನಕಾರರು ಆತ್ಮಾಹುತಿಗೆ ಪ್ರಯತ್ನಿಸಿದರು. ಉತ್ತಾರಾಖಂಡದ ಋಷಿಕೇಶದ ಸಿನೆಮಾ ಮಂದಿರದ ಹೊರಗೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ.
ಮುಝಾಫರನಗರ್, ಆಗ್ರಾ ಹಾಗೂ ಮುಘಲ್‌ಸರಾಯ್ ಸೇರಿದಂತೆ ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆದಿದೆ. ಶಾಂತಿಯುತ ಸಿನೆಮಾ ಪ್ರದರ್ಶನಕ್ಕೆ ಭದ್ರತೆ ಒದಗಿಸಿ ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಉನ್ನತ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.
6 ರಾಜ್ಯಗಳಲ್ಲಿ ಹಿಂಸಾಚಾರ ಬುಧವಾರವೇ ಆರಂಭವಾಗಿದ್ದು, ಇಂದು ಕೂಡ ಮುಂದುವರಿದಿದೆ. ಉತ್ತರಪ್ರದೇಶದ ಮಥುರಾದಲ್ಲಿ ಪ್ರಯಾಣಿಕರ ರೈಲು ಸಂಚಾರ ರದ್ದುಗೊಳಿಸಲಾಗಿದೆ. ರಾಜಸ್ಥಾನ ಹಾಗೂ ಹರ್ಯಾಣದಲ್ಲಿರುವ ದಿಲ್ಲಿ-ಜೈಪುರ ಹೆದ್ದಾರಿ ಹಾಗೂ ಇತರ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನಕಾರರು ಅಂಗಡಿ ಹಾಗೂ ಮಾರುಕಟ್ಟೆಗಳನ್ನು ಬಲವಂತವಾಗಿ ಬಂದ್ ಮಾಡಿದರು. ಎಟವಾದಲ್ಲಿ ಗುಂಪೊಂದರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಹಾಗೂ ಗೋವಾದಲ್ಲಿ ಪದ್ಮಾವತ್ ಚಲನಚಿತ್ರವನ್ನು ಪ್ರದಶಿಸುವುದಿಲ್ಲ. ಅಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎಂದು ದೇಶದ ಶೇ. 75 ಮಲ್ಟಿಫ್ಲೆಕ್ಸ್‌ಗಳನ್ನು ಪ್ರತಿನಿಧಿಸುತ್ತಿರುವ ಮಲ್ಟಿಫ್ಲೆಕ್ಸ್ ಅಸೋಶಿಯೇಶನ್ ಆಫ್ ಇಂಡಿಯಾ ಹೇಳಿದೆ.
ನ್ಯಾಯಾಂಗ ನಿಂದನೆ ದೂರು ದಾಖಲು
ಹೊಸದಿಲ್ಲಿ: ‘ಪದ್ಮಾವತ್’ ಚಲನಚಿತ್ರ ಬಿಡುಗಡೆಗೆ ಅವಕಾಶ ನೀಡುವ ಆದೇಶ ಉಲ್ಲಂಘಿಸಿದ ನಾಲ್ಕು ರಾಜ್ಯಗಳು ಹಾಗೂ ಶ್ರೀ ಕರ್ಣಿ ಸೇನೆ ವಿರುದ್ಧ ನ್ಯಾಯಾಲಯ ನಿಂದನೆಯ ಎರಡು ಪ್ರತ್ಯೇಕ ದೂರುಗಳನ್ನು ಸರ್ವೋಚ್ಚ ನ್ಯಾಯಾಲಯ ಜನವರಿ 29ರಂದು ವಿಚಾರಣೆ ನಡೆಸಲಿದೆ. ಚಲನಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಗುಂಪನ್ನು ನಿಯಂತ್ರಿಸಲು ವಿಫಲವಾದ ರಾಜಸ್ತಾನ, ಹರ್ಯಾಣ, ಗುಜರಾತ್, ಮಧ್ಯಪ್ರದೇಶ ಸರಕಾರದ ವಿರುದ್ಧ ಕಾಂಗ್ರೆಸ್ ಬೆಂಬಲಿಗ ತಹ್ಸೀನ್ ಪೂನಾವಾಲ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸಿದ್ದರು. ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಕರ್ಣಿ ಸೇನಾ ಹಾಗೂ ಅದರ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರತ್ಯೇಕ ದೂರನ್ನು ನ್ಯಾಯವಾದಿಯೊಬ್ಬರು ದಾಖಲಿಸಿದ್ದಾರೆ.
‘ಘೂಮರ್’ ಹಾಡಿಗೆ ನೃತ್ಯ ಮಾಡಬೇಡಿ
ಉದಯ್‌ಪುರ: ಗಣರಾಜ್ಯೋತ್ಸವ ಸಂಭ್ರಮಾಚರಣೆ ಸಂದರ್ಭ ‘ಪದ್ಮಾವತ್’ ಚಲನಚಿತ್ರದ ‘ಘೂಮರ್’ ಹಾಡಿಗೆ ಸರಕಾರಿ ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳು ನೃತ್ಯ ಮಾಡಬಾರದು ಎಂದು ಉದಯ್‌ಪುರ ಎಡಿಎಂ ಎಸ್.ಸಿ. ಶರ್ಮಾ ಆದೇಶ ಹೊರಡಿಸಿದ್ದಾರೆ.
ಸಿನೆಮಾ ಮಂದಿರ ಮಾಲಕನಿಗೆ ಥಳಿತ
ಲಕ್ನೊ: ಉತ್ತರಪ್ರದೇಶದಲ್ಲಿ ಪದ್ಮಾವತ್ ಚಲನಚಿತ್ರ ಪ್ರದರ್ಶಿಸಿದ ಎಸ್‌ಸಿಎಂ ಮಲ್ಟಿಫ್ಲೆಕ್ಸ್‌ನ ಮಾಲಕ ಸಂಜಯ್ ಅಗರ್‌ವಾಲ್‌ಗೆ ಪ್ರತಿಭಟನಕಾರರು ಥಳಿಸಿದ್ದಾರೆ. ಅವರ ಬಿಎಂಡಬ್ಲು ಕಾರಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಿಕಾ ಪಡುಕೋಣೆ ಕಿವಿ, ಮೂಗು ಕತ್ತರಿಸಿದವರಿಗೆ 1 ಕೋ. ರೂ.
ಮುಂಬೈ: ದೀಪಿಕಾ ಪಡುಕೋಣೆ ಅವರ ಕಿವಿ ಹಾಗೂ ಮೂಗು ಕತ್ತರಿಸುವ ವ್ಯಕ್ತಿಗೆ ಕ್ಷತ್ರೀಯ ಸಮುದಾಯ 1. ಕೋ. ರೂ. ಬಹುಮಾನ ನೀಡಲಿದೆ ಎಂದು ಕ್ಷತ್ರೀಯ ಮಹಾಸಭಾದ ಗಜೇಂದ್ರ ಸಿಂಗ್ ಹೇಳಿದ್ದಾರೆ.
ಭಾವನೆಗಳಿಗೆ ಧಕ್ಕೆ: ಆರ್‌ಎಸ್‌ಎಸ್
ಜೈಪುರ: ದೃಢೀಕೃತವಲ್ಲದ ಹಾಗೂ ವಿವಾದಾತ್ಮಕ ಮಾಹಿತಿಯ ಆಧಾರದಲ್ಲಿ ವೀರ ವನಿತೆಯ ನಡವಳಿಕೆ ಹಾಗೂ ಅವರ ಬದುಕನ್ನು ಚಿತ್ರಿಸುವ ಮೂಲಕ ಸಂಜಯ್ ಲೀಲಾ ಬನ್ಸಾಲಿ ಅವರು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಚಲನಚಿತ್ರ ಸಮಾಜಿಕ ಸಾಮರಸ್ಯ ಹಾಗೂ ಭಾತೃತ್ವದ ಸಂದೇಶ ನೀಡಬೇಕು ಎಂದು ಎಂದು ಆರ್‌ಎಸ್‌ಎಸ್‌ನ ವಾಯುವ್ಯ ವಲಯದ ಸಂಘಚಾಲಕ್ ಭಗವತಿ ಪ್ರಕಾಶ್ ಹೇಳಿದ್ದಾರೆ.