ದಿಮ ಹಸವೊ ಬಂದ್: ರೈಲು ಪ್ರಯಾಣಿಕರ ಮೇಲೆ ದಾಳಿ; ಪೊಲೀಸರಿಂದ ಗಾಳಿಯಲ್ಲಿ ಗುಂಡು

ಮೈಬೊಂಗ್ (ಅಸ್ಸಾಂ), ಜ.25: ದಿಮ ಹಸವೊ ಜಿಲ್ಲೆಯನ್ನು ಗ್ರೇಟರ್ ನಗಲಿಮ್‌ಗೆ ಸೇರಿಸುವ ಪ್ರಸ್ತಾವನೆಯನ್ನು ವಿರೋಧಿಸಿ ಗುರುವಾರದಂದು ಕರೆನೀಡಲಾಗಿದ್ದ 12 ಗಂಟೆಗಳ ಬಂದ್ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದೆ.
ಬಂದ್ ಆಯೋಜಕರ ಗುಂಪೊಂದು ರೈಲಿನ ಮೇಲೆ ದಾಳಿ ನಡೆಸಿ ಅದರೊಳಗಿದ್ದ ಪ್ರಯಾಣಿಕರನ್ನು ಹೊರಗೆಳೆದು ಅವರು ತಮ್ಮ ಪ್ರಯಾಣವನ್ನು ಮುಂದುವರಿಸದಂತೆ ತಡೆದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಪೊಲೀಸರು ಮತ್ತು ಅವರ ವಾಹನಗಳ ಮೇಲೆ ಪ್ರದರ್ಶನಕಾರರು ಕಲ್ಲುಗಳನ್ನು ಎಸೆದ ಪರಿಣಾಮ ಹಾಗೂ ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಡೆಯುವ ಉದ್ದೇಶದಿಂದ ಇಡೀ ಪ್ರದೇಶದಲ್ಲಿ ಅನಿಶ್ಚಿತ ಅವಧಿಯವರೆಗೆ ಕರ್ಫ್ಯೂ ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಮೈಬೊಂಗ್ ರೈಲು ನಿಲ್ದಾಣದಲ್ಲಿ ರೈಲು ಹಳಿಯ ಮೇಲೆ ಕುಳಿತು ರೈಲು ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ಗುವಹಾಟಿಯಿಂದ ಸಿಲ್ಚರ್‌ಗೆ ಪ್ರಯಾಣಿಸುತ್ತಿದ್ದ ರೈಲನ್ನು ಗುಂಪೊಂದು ತಡೆದಾಗ ಪೊಲೀಸರು ಅಶ್ರುವಾಯುವನ್ನು ಸಿಡಿಸಿದ್ದರು. ಆದರೆ ಇದರಿಂದ ಮತ್ತಷ್ಟು ಕೆರಳಿದ ಪ್ರದರ್ಶನಕಾರರು ರೈಲುಗಳ ಮೇಲೆ ದಾಳಿ ನಡೆಸಿ ರೈಲ್ವೆ ಇಲಾಖೆಗೆ ಸೇರಿದ ಆಸ್ತಿಗೆ ಹಾನಿ ಮಾಡಿದರು. ಜೊತೆಗೆ ರೈಲು ಹಳಿಗಳನ್ನು ಕೀಳಲು ಪ್ರಯತ್ನಿಸಿದರು ಎಂದು ಪತ್ರಿಕೆ ವರದಿ ಮಾಡಿದೆ.
ಬಂದ್‌ನಿಂದಾಗಿ ವಾಹನ ಸಂಚಾರ ಇಲ್ಲಿದ್ದ ಕಾರಣ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದು ರೈಲು ಪ್ರಯಾಣಿಕರಿಗೆ ಸಮೀಪದ ಶಾಲೆಗಳಲ್ಲಿ ತಂಗಲು ಅವಕಾಶ ನೀಡಲಾಗಿತ್ತು ಮತ್ತು ಅವರಿಗೆ ಆಹಾರದ ವ್ಯವಸ್ತೆಯನ್ನು ಮಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಸರಕಾರ ಮತ್ತು ಬಂಡುಕೋರರ ನಡುವಿನ ನಾಗಾ ಒಪ್ಪಂದದ ಕರಡು ಪ್ರತಿಯಲ್ಲಿ ದಿಮ ಹಸವೊ ಜಿಲ್ಲೆಯನ್ನು ಗ್ರೇಟರ್ ನಗಲಿಮ್‌ಗೆ ಸೇರಿಸುವ ಹೇಳಿಕೆನ್ನು ಪ್ರಸ್ತಾವವನ್ನು ಮಾಡಿರುವ ಈಶಾನ್ಯ ಭಾಗದ ಆರ್‌ಎಸ್ಸೆಸ್ ಪ್ರಚಾರಕ ಜಗದಂಬಾ ಮಾಲ್ ಕ್ಷಮೆ ಕೇಳಬೇಕು ಎಂದು ಪ್ರದರ್ಶನಕಾರರು ಆಗ್ರಹಿಸಿದರು. ದಿಮಸ ವಿದ್ಯಾರ್ಥಿ ಸಂಘಟನೆ, ಅಖಿಲ ದಿಮಸ ವಿದ್ಯಾರ್ಥಿ ಸಂಘಟನೆ, ದಿಮಸ ಮಹಿಳಾ ಸಮಾಜ ಮತ್ತು ದಿಮಸ ತಾಯಂದಿರ ಸಂಘವು ಈ ಬಂದ್‌ನಲ್ಲಿ ಜದಿಕೆ ನೈಸೊ ಹೊಸುಮ್ ಸಂಘಟನೆ ಜೊತೆ ಕೈಜೋಡಿಸಿದ್ದವು.