ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ
ಫೆ.9ಕ್ಕೆ ಮುಂದಿನ ಪ್ರಕ್ರಿಯೆ
ಉಡುಪಿ, ಜ. 25: ನಗರದ ಉದ್ಯಮಿ ಇಂದ್ರಾಳಿಯ ಭಾಸ್ಕರ್ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಐಡಿ ಪೊಲೀಸರು 101 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ನ್ನು ಗುರುವಾರ ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಭಾಸ್ಕರ ಶೆಟ್ಟಿ ಅವರ ಮೇಲೆ ಉಡುಪಿಯ ಮನೆಯಲ್ಲಿ ಹಲ್ಲೆ ನಡೆಸಿ, ಬೆಳ್ಮಣ್ ಸಮೀಪ ಹೋಮಕುಂಡದಲ್ಲಿ ಹಾಕಿ ಸುಟ್ಟು ಕೊಲೆ ಮಾಡಿದ ಪ್ರಕರಣದ ಆರೋಪಿಗಳಾದ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ (51), ಮಗ ನವನೀತ ಶೆಟ್ಟಿ (21) ಮತ್ತು ನಂದಳಿಕೆ ನಿರಂಜನ ಭಟ್ಟ (27) ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಗುರುವಾರ ಅವರನ್ನು ಬೆಂಗಳೂರಿನಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟಿಗೆ ಹಾಜರು ಪಡಿಸಲಾಯಿತು. ಸದ್ಯ ಜಾಮೀನಿನಲ್ಲಿರುವ ಸಾಕ್ಷನಾಶದ ಆರೋಪಿಗಳಿಬ್ಬರು ಉಡುಪಿ ಕೋರ್ಟ್‌ನಲ್ಲಿ ಹಾಜರಿದ್ದರು.
ಮುಂದಿನ ವಿಚಾರಣಾ ಪ್ರಕ್ರಿಯೆಗೆ ನ್ಯಾಯಾಧೀಶರು ಫೆ. 9ಕ್ಕೆ ದಿನಾಂಕ ನಿಗದಿಪಡಿಸಿದರು. ಅಂದು ಪ್ರಕರಣದ ವಿಚಾರಣಾ ದಿನಾಂಕ ನಿಗದಿ, ಹಾಜರು ಪಡಿಸುವ ಸಾಕ್ಷಿಗಳ ಕುರಿತು ನಿರ್ಧಾರವಾಗಲಿದೆ.
ಈ ಹಿಂದೆ 816 ಪುಟಗಳ ಚಾರ್ಜ್‌ಶೀಟ್ ಅನ್ನು ಸಿಐಡಿ ಪೊಲೀಸರು ಸಲ್ಲಿಸಿದ್ದು, ಇದೀಗ ಹೆಚ್ಚುವರಿಯಾಗಿ 101 ಪುಟಗಳನ್ನು ಅದಕ್ಕೆ ಸೇರಿಸಲಾಗಿದೆ. ಈ ಮೊದಲು 147 ಸಾಕ್ಷಿಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದರೆ, ಈಗ ಸಲ್ಲಿಕೆಯಾಗಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಮತ್ತೆ 20 ಸಾಕ್ಷಿಗಳನ್ನು ಸೇರಿಸಲಾಗಿದೆ. ತಜ್ಞರ ವರದಿಗಳ ಸಹಿತ ಹಲವು ದಾಖಲೆ, ಸಾಕ್ಷಗಳು ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿವೆ.
ಸಿಐಡಿ ಡಿವೈಎಸ್‌ಪಿ ಚಂದ್ರಶೇಖರ್ ಅವರು ಹೆಚ್ಚುವರಿ ಚಾರ್ಜ್‌ಶೀಟ್ ಅನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕಾ ಅವರ ಮುಂದೆ ಸಲ್ಲಿಸಿದರು. ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಹಾಗೂ ಆರೋಪಿಗಳ ಪರ ಹಿರಿಯ ನ್ಯಾಯವಾದಿ ಅರುಣ್ ಬಂಗೇರ ಬೆಳುವಾಯಿ ಉಪಸ್ಥಿತರಿದ್ದರು.







