‘ಸಮಯ ತಪ್ಪಿಸಿ’ ರೋಗಿಗೆ ಇಂಜೆಕ್ಷನ್ ನೀಡಿದ ನರ್ಸ್: ನರ್ಸ್ ಕುತ್ತಿಗೆ ಹಿಸುಕಿದ ಭಾರತೀಯ ಅಮೆರಿಕನ್ ವೈದ್ಯ?

ವಾಶಿಂಗ್ಟನ್, ಜ. 25: ‘ಸಮಯ ತಪ್ಪಿಸಿ’ ತನ್ನ ರೋಗಿಗೆ ಇಂಜೆಕ್ಷನ್ ನೀಡಿದ ನರ್ಸನ್ನು ಭಾರತೀಯ ಅಮೆರಿಕನ್ ವೈದ್ಯರೊಬ್ಬರು ರಬ್ಬರ್ ದಾರದಿಂದ ಕತ್ತು ಹಿಸುಕಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ, ಈ ಆರೋಪವನ್ನು 44 ವರ್ಷದ ವೆಂಕಟೇಶ್ ಸಸ್ತಕೊನರ್ ನಿರಾಕರಿಸಿದ್ದಾರೆ ಹಾಗೂ ಜನವರಿ 22ರಂದು ನಡೆದ ಘಟನೆಯನ್ನು ಉತ್ಪ್ರೇಕ್ಷೆ ಮಾಡಲಾಗಿದೆ ಎಂದುದ ಆರೋಪಿಸಿದ್ದಾರೆ.
ನ್ಯೂಯಾರ್ಕ್‌ನ ನಸಾವು ವಿಶ್ವವಿದ್ಯಾನಿಲಯ ವೈದ್ಯಕೀಯ ಕೇಂದ್ರದಲ್ಲಿ ತೂಕ ಕಡಿಮೆ ಮಾಡುವ ಸರ್ಜನ್ ಆಗಿರುವ ವೆಂಕಟೇಶ್ ವಿರುದ್ಧ ಪೊಲೀಸರು 51 ವರ್ಷದ ನರ್ಸ್‌ನ ಕತ್ತು ಹಿಸುಕಿ ಅವರ ಪ್ರಾಣವನ್ನು ಅಪಾಯಕ್ಕೊಡ್ಡಿದ ಆರೋಪವನ್ನು ಹೊರಿಸಿದ್ದಾರೆ.
ತನ್ನ ರೋಗಿಗೆ ತಡವಾಗಿ ಇಂಜೆಕ್ಷನ್ ನೀಡಿದ ನರ್ಸ್ ವಿರುದ್ಧ ವೈದ್ಯರು ಆಕ್ರೋಶಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆಗ ವೆಂಕಟೇಶ್ ನರ್ಸ್‌ರ ಹಿಂದಿನಿಂದ ಬಂದು ರಬ್ಬರ್ ದಾರವನ್ನು ಅವರ ಕುತ್ತಿಗೆಗೆ ಸುತ್ತಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘‘ವೈದ್ಯರು ನರ್ಸ್‌ರ ಚರ್ಮವನ್ನೂ ಮುಟ್ಟಲಿಲ್ಲ. ಅವರಿಗೆ ಹಾನಿ ಮಾಡುವ ಉದ್ದೇಶ ಅವರಲ್ಲಿ ಇರಲಿಲ್ಲ. ನರ್ಸ್‌ಗೆ ಯಾವ ಗಾಯವೂ ಆಗಿಲ್ಲ’’ ಎಂದು ವೈದ್ಯರ ವಕೀಲರು ಹೇಳಿದ್ದಾರೆ.





