ಆಟೋ ಚಾಲಕ ಆತ್ಮಹತ್ಯೆ ಪ್ರಕರಣ : ಕರವೇ ಜಿಲ್ಲಾಧ್ಯಕ್ಷ ಸೇರಿ ಇಬ್ಬರ ಬಂಧನ

ಶಿವಮೊಗ್ಗ, ಜ. 25: ಕನ್ನಡ ಪರ ಸಂಘಟನೆಯೊಂದರ ಮುಖಂಡರ ಕಿರುಕುಳದಿಂದ ಬೇಸತ್ತು ಮೊಬೈಲ್‍ನಲ್ಲಿ ಸೆಲ್ಫಿ ವೀಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಆಟೋ ಚಾಲಕ ನೂರುಲ್ಲಾ (36) ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಇಬ್ಬರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಜಿಲ್ಲಾಧ್ಯಕ್ಷ ಮಂಜುನಾಥ್ ಕೋಟ್ಯಾನ್ ಹಾಗೂ ಅದೇ ಸಂಘಟನೆಯ ಆಟೋ ಚಾಲಕ ಘಟಕದ ಉಪಾಧ್ಯಕ್ಷ ಶಬ್ಬೀರ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರನ್ನು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗ್ರಾಮವೊಂದರಲ್ಲಿ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ನಂತರ ಇವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ: ಮಂಜುನಾಥ್ ಕೋಟ್ಯಾನ್ ಅಧ್ಯಕ್ಷರಾಗಿರುವ ಕರವೇ ಬಣದಲ್ಲಿ ನೂರುಲ್ಲಾರವರು ಗುರುತಿಸಿಕೊಂಡಿದ್ದರು. ಅದೇ ಘಟಕದ ಆಟೋ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜೋತ್ಸವ ಕಾರ್ಯಕ್ರಮಕ್ಕಾಗಿ ನೂರುಲ್ಲಾರವರು ಸಾವಿರಾರು ರೂ.ಗಳನ್ನು ಸಂಗ್ರಹಿಸಿ ಸಂಘಟನೆಯ ಅಧ್ಯಕ್ಷರಿಗೆ ನೀಡಿದ್ದರು. ಆದರೆ ರಾಜೋತ್ಸವ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ. ಇದರಿಂದ ಬೇಸರಗೊಂಡ ನೂರುಲ್ಲಾರವರು ಆ ಸಂಘಟನೆಯಿಂದ ಹೊರಬಂದು ನಾರಾಯಣಗೌಡ ಬಣಕ್ಕೆ ಸೇರ್ಪಡೆಗೊಂಡಿದ್ದರು ಎನ್ನಲಾಗಿದೆ.
ಈ ಮೊದಲು ಆಟೋ ಖರೀದಿಗಾಗಿ ನೂರುಲ್ಲಾರವರು ಮಂಜುನಾಥ್ ಕೋಟ್ಯಾನ್‍ರಿಂದ 15 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಆದರೆ ಸಾಲ ತೀರಿಸಲು ಆಗಿರಲಿಲ್ಲ. ಸಂಘಟನೆ ತೊರೆದಿದ್ದರಿಂದ ಆಕ್ರೋಶಗೊಂಡಿದ್ದ ಮಂಜುನಾಥ್‍ರವರು, 15 ಸಾವಿರ ರೂ. ಸಾಲಕ್ಕೆ 20 ಸಾವಿರ ರೂ. ಸೇರಿಸಿ ನೀಡುವಂತೆ ಆಗ್ರಹಿಸಿದ್ದರು. ಈ ಕುರಿತಂತೆ ಸಾಕಷ್ಟು ಹಿಂಸೆ ನೀಡಿದ್ದರು. ಹಲ್ಲೆ ಕೂಡ ನಡೆಸಿದ್ದರು ಎನ್ನಲಾಗಿದೆ.
ಇದನ್ನೆಲ್ಲ ಮೊಬೈಲ್‍ನ ಸೆಲ್ಪಿ ವೀಡಿಯೋದಲ್ಲಿ ದಾಖಲಿಸಿ ಜ.11 ರಂದು ನೂರುಲ್ಲಾರವರು ವಿಷ ಸೇವಿಸಿದ್ದರು. ತಕ್ಷಣವೇ ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ. 17 ರಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು. ಈ ಕುರಿತಂತೆ ನಗರ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಮಂಜುನಾಥ ಕೋಟ್ಯಾನ್ ಹಾಗೂ ಶಬ್ಬೀರ್‍ರವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಯ ನಂತರ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು.







