ತದ್ರೂಪಿ ತಂತ್ರಜ್ಞಾನದ ಮೂಲಕ ಮಂಗಗಳ ಸೃಷ್ಟಿ
ಚೀನಾ ವಿಜ್ಞಾನಿಗಳ ಸಾಧನೆ

ಬೀಜಿಂಗ್, ಜ. 25: ತದ್ರೂಪಿ ಸೃಷ್ಟಿ ತಂತ್ರಜ್ಞಾನದ ಮೂಲಕ ಚೀನಾದ ವೈದ್ಯರು ಮೊದಲ ಬಾರಿಗೆ ಮಂಗಗಳನ್ನು ಸೃಷ್ಟಿಸಿದ್ದಾರೆ. ಈ ಬೆಳವಣಿಗೆಯು ಮಾನವ ರೋಗಗಳ ಕುರಿತ ವೈದ್ಯಕೀಯ ಸಂಶೋಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಬಹುದು ಎಂಬುದಾಗಿ ಭಾವಿಸಲಾಗಿದೆ.
ಇದೇ ತಂತ್ರಜ್ಞಾನವನ್ನು ಬಳಸಿ 20 ವರ್ಷಗಳ ಹಿಂದೆ ‘ಡಾಲಿ’ ಎಂಬ ಕುರಿಯನ್ನು ಸೃಷ್ಟಿಸಲಾಗಿತ್ತು.
ಎರಡು ಉದ್ದ ಬಾಲದ ಮಕಾಕ್ ಮಂಗಗಳು ಶಾಂಘೈಯಲ್ಲಿರುವ ಚೈನೀಸ್ ಅಕಾಡಮಿ ಆಫ್ ಸಯನ್ಸಸ್ (ಸಿಎಎಸ್) ಇನ್‌ಸ್ಟಿಟ್ಯೂಟ್ ಆಫ್ ನ್ಯೂರೊಸಯನ್ಸ್‌ನಲ್ಲಿ ಜನಿಸಿವೆ. ಅವುಗಳಿಗೆ ಹುವ ಹುವ ಮತ್ತು ಝಾಂಗ್ ಝಾಂಗ್ ಎಂಬ ಹೆಸರುಗಳನ್ನು ಇಡಲಾಗಿದೆ.
‘ಸೊಮಾಟಿಕ್ ಸೆಲ್ ನ್ಯೂಕ್ಲಿಯರ್ ಟ್ರಾನ್ಸ್‌ಫರ್’ ಎಂಬ ತದ್ರೂಪಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಹಲವಾರು ವರ್ಷಗಳ ಸಂಶೋಧನೆಯ ಫಲವಾಗಿ ಈ ಮಂಗಗಳ ಸೃಷ್ಟಿಯಾಗಿವೆ.
ಈವರೆಗೆ ಈ ತಂತ್ರಜ್ಞಾನವನ್ನು ಬಳಸಿ ನಾಯಿಗಳು, ಹಂದಿಗಳು ಮತ್ತು ಬೆಕ್ಕುಗಳು ಸೇರಿದಂತೆ 20ಕ್ಕೂ ಅಧಿಕ ಪ್ರಾಣಿ ಪ್ರಭೇದಗಳ ತದ್ರೂಪಿಗಳನ್ನು ಸೃಷ್ಟಿಸಲಾಗಿದೆ. ಆದರೆ ಮಂಗಗಳ ತದ್ರೂಪಿ ಸೃಷ್ಟಿ ಕಷ್ಟವಾಗಿತ್ತು.
ಮಾನವರ ತದ್ರೂಪಿ ಸೃಷ್ಟಿಯೂ ಸಾಧ್ಯ
ಮಕಾಕ್ ಮಂಗಗಳ ತದ್ರೂಪಿ ಸೃಷ್ಟಿಯು ಹಲವು ನೈತಿಕ ಪ್ರಶ್ನೆಗಳನ್ನೂ ಎತ್ತಿದೆ. ತದ್ರೂಪಿ ಮಾನವರ ಸೃಷ್ಟಿಗೆ ಇನ್ನು ಎಷ್ಟು ಸಮಯ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಇದೇ ತಂತ್ರಜ್ಞಾನವನ್ನು ಬಳಸಿ ಮಾನವರನ್ನೂ ಸೃಷ್ಟಿಸಬಹುದಾಗಿದೆ ಎಂದು ಸಿಎಎಸ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೊಸಯನ್ಸ್‌ನ ನಿರ್ದೇಶಕ ಮುಮಿಂಗ್ ಪೂ ಹೇಳುತ್ತಾರೆ. ಆದರೆ, ತನ್ನ ತಂಡದ ಆದ್ಯತೆ ವೈದ್ಯಕೀಯ ಉದ್ದೇಶಗಳಿಗಾಗಿ ತದ್ರೂಪಿಗಳನ್ನು ಸೃಷ್ಟಿಸುವುದಾಗಿದೆ ಎಂದು ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಒಂದು ದಿನ ಈ ತಂತ್ರಜ್ಞಾನವನ್ನು ಬಳಸಿ ಒಂದೇ ವಂಶವಾಹಿಯ ಮಂಗಗಳನ್ನು ಬೃಹತ್ ಪ್ರಮಾಣದಲ್ಲಿ ಸೃಷ್ಟಿಸಬಹುದಾಗಿದೆ. ಆ ಮಂಗಗಳನ್ನು ವೈದ್ಯಕೀಯ ಸಂಶೋಧನೆಗಳಲ್ಲಿ ಬಳಸಬಹುದಾಗಿದೆ ಹಾಗೂ ಆ ಮೂಲಕ ಕಾಡಿನಿಂದ ಮಂಗಗಳನ್ನು ತರುವುದನ್ನು ನಿಲ್ಲಿಸಬಹುದಾಗಿದೆ ಎಂದು ಪೂ ಹೇಳುತ್ತಾರೆ.
‘‘ಅಮೆರಿಕವೊಂದರಲ್ಲೇ ಔಷಧ ತಯಾರಿಕಾ ಕಂಪೆನಿಗಳು ವರ್ಷಕ್ಕೆ 30,000ದಿಂದ 40,000 ಮಂಗಗಳನ್ನು ಆಮದು ಮಾಡಿಕೊಳ್ಳುತ್ತಿವೆ ಎಂದರು.







