ಸಂತಾನೋತ್ಪತ್ತಿಗೆ ಕೈದಿಗೆ ಎರಡು ವಾರ ಪರೋಲ್ ನೀಡಿದ ಮದ್ರಾಸ್ ಹೈಕೋರ್ಟ್

ಮಧುರೈ, ಜ. 25: ವಿಚಿತ್ರ ತೀರ್ಪುಗಳನ್ನು ನೀಡುವುದರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯ ಮುಂಚೂಣಿಯಲ್ಲಿದೆ. ಈಗ ಈ ನ್ಯಾಯಾಲಯ ತಿರುನಲ್ವೇಲಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬನಿಗೆ ಸಂತಾನೋತ್ಪತ್ತಿಗಾಗಿ ಎರಡು ವಾರಗಳ ಕಾಲ ಪರೋಲ್ ನೀಡಿದೆ.
‘‘ಅಪರಾಧಿಯ ಪತ್ನಿ ನ್ಯಾಯಬದ್ಧವಾಗಿ ಮಗು ಹೊಂದಲು ಬಯಸುತ್ತಿದ್ದಾರೆ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ’’ ಎಂದು ಹೇಳಿರುವ ಉಚ್ಚ ನ್ಯಾಯಾಲಯ, ಸಂತಾನೋತ್ಪತ್ತಿಗಾಗಿ ಕೈದಿಗೆ ಪರೋಲ್ ನೀಡಿದೆ.
32 ಹರೆಯದ ಪತ್ನಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪಾಳಯಂಕೋಟೈಯ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಿದ್ದೀಕ್ ಅಲಿಗೆ ನ್ಯಾಯಮೂರ್ತಿ ಎಸ್. ವಿಮಲಾ ದೇವಿ ಹಾಗೂ ಟಿ. ಕೃಷ್ಣ ವಲ್ಲಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಎರಡು ವಾರಗಳ ಪರೋಲ್ ನೀಡಿದೆ.
ಈ ಹಿಂದೆ ಸಿದ್ದೀಕ್ ಅಲಿ ಪರೋಲ್ ನಿರಾಕರಿಸಿದ್ದರು. ರಾಜ್ಯ ಸರಕಾರದ ಆತಂಕವನ್ನು ನಿರಾಕರಿಸಿರುವ ಉಚ್ಚ ನ್ಯಾಯಾಲಯ, ಅಸಾಧಾರಣ ಕಾರಣಕ್ಕಾಗಿ ಕೈದಿಗಳಿಗೆ ಪರೋಲ್ ನೀಡಬಹುದು ಎಂದು ಹೇಳಿದೆ.