ಸಂತ ಲಾರೆನ್ಸರ ಬದುಕಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ: ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ

ಕಾರ್ಕಳ, ಜ. 25: ಸಂತ ಲಾರೆನ್ಸರ ಆದರ್ಶಗಳನ್ನು ಮೈಗೂಡಿಸಿಕೊಂಡಲ್ಲಿ ಬದುಕಿನಲ್ಲಿ ಸಾರ್ಥಕತೆಯನ್ನು ಕಾಣಲು ಸಾಧ್ಯವಿದೆ. ಪ್ರಸಕ್ತ ಸಾಲಿನ ಜಾತ್ರೆ ಮಹೋತ್ಸವ ಸಂದೇಶದಂತೆ ಬಡವರನ್ನು ಆಧರಿಸುವವನು ಭಾಗ್ಯವಂತನು ಎನ್ನುವುದು ಅರ್ಥಪೂರ್ಣವಾಗುತ್ತದೆ ಎಂದು ಮಂಗಳೂರಿನ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಅಲೆಶಿಯಸ್ ಪಾವ್ಲ್ ಡಿಸೋಜಾ ಹೇಳಿದ್ದಾರೆ.
ಅವರು ಅತ್ತೂರು ಸಂತಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಹಬ್ಬದ ಪೂಜೆ ನೆರವೇರಿಸಿ ಆಶೀರ್ವನ ನೀಡಿದರು.
ಸಂತಲಾರೆನ್ಸರು ಅವರಲ್ಲಿದ್ದ ಪವಿತ್ರ ಸಭೆಯ ಆಸ್ತಿಯನ್ನು ಮಾರಾಟ ಮಾಡಿ ಬಡಬಗ್ಗರಿಗೆ ಹಂಚಿದರು. ಸಮಾಜದಲ್ಲಿರುವ ಅಶಕ್ತರ ಅಗತ್ಯತೆಗಳನ್ನು ಪೂರೈಸಿ, ಆ ಕಾರಣಕ್ಕಾಗಿಯೇ ಹುತಾತ್ಮರಾದರು. ಅವರ ಜೀವನ ಆದರ್ಶಗಳನ್ನು ಪೂರೈಸುವವರು ಈಗಲೂ ಇದ್ದಾರೆ ಎಂದು ಹಲವರ ಹೆಸು ಉಲ್ಲೇಖಿಸಿ, ಉದಾಹರಣೆ ನೀಡಿದರು.
ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಎಡಬಿಡದ ಕೆಲಸಗಳ ನಡುವೆಯೂ ಬಡವರನ್ನು ಭೇಟಿ ಮಾಡಿ, ಅವರ ಕಷ್ಟಗಳನ್ನು ಆಲಿಸಿ, ಸಾಧ್ಯವಾದಷ್ಟು ಪರಿಹಾರವನ್ನು ನೀಡುತ್ತಿದ್ದಾರೆ. ಇಲ್ಲಿ ಸೇರಿದ ಭಕ್ತಾದಿಗಳು ತಮ್ಮಲ್ಲಿರುವ ಗಳಿಕೆಯ ಒಂದಿಷ್ಟು ಭಾಗವನ್ನು ಬಡವರಿಗಾಗಿ ವಿನಿಯೋಗಿಸುವ ಸಂಕಲ್ಪ ಮಾಡಿದರೆ ಈ ಪುಣ್ಯಕ್ಷೇತ್ರದಲ್ಲಿ ಭಾಗವಹಿಸಿರುವುದಕ್ಕೆ ಸಾರ್ಥಕತೆ ಪಡೆಯುತ್ತದೆ ಎಂದರು.
ಇದೇ ಸಂದರ್ಭ ಉಡುಪಿ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೊಬೋ, ಅತ್ತೂರು ಸಂತಲಾರೆನ್ಸ್ ಬಸಿಲಿಕದ ನಿರ್ದೇಶಕ ಹಾಗೂ ಧರ್ಮಗುರುಗಳಾದ ವಂ.ಜೋರ್ಜ್ ಡಿಸೋಜಾ, ಸಹಾಯಕ ಧರ್ಮಗುರುಗಳಾದ ವಂ.ಜೆನ್ಸಿಲ್ ಆಳ್ವ, ಕೈಸ್ಟ್ ಕಿಂಗ್ ಚರ್ಚ್‌ನ ಧರ್ಮಗುರುಗಳಾದ ವಂ.ಜೊಸ್ವಿ ಫೆರ್ನಾಂಡೀಸ್ ಉಪಸ್ಥಿತರಿದ್ದರು.







