ಯುವ ವಕೀಲರು ಜೀವನಾನುಭವದ ಪುಸ್ತಕ ಓದುವ ಅವಶ್ಯಕತೆಯಿದೆ: ನ್ಯಾ.ರತ್ನಕಲಾ
.jpg)
ಬೆಂಗಳೂರು, ಜ.25: ಯುವ ವಕೀಲರು ಕಾನೂನು ಪುಸ್ತಕಗಳನ್ನು ಓದುವುದರ ಜೊತೆಗೆ ಜೀವನಾನುಭವದ ಪುಸ್ತಕಗಳನ್ನೂ ಓದಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿ ರತ್ನಕಲಾ ಸಲಹೆ ನೀಡಿದ್ದಾರೆ.
ಗುರುವಾರ ಹೈಕೋರ್ಟ್ ಆವರಣದಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡಿದರು. ವಕೀಲರು ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಂಡು ವಕೀಲ ವೃತ್ತಿಯನ್ನು ಮಾಡಬೇಕಾಗಿರುತ್ತದೆ. ಹೀಗಾಗಿ, ವಕೀಲರು ಕಾನೂನು ಪುಸ್ತಕಗಳನ್ನು ಓದುವುದರ ಜೊತೆಗೆ ಜೀವನಾನುಭವದ ಪುಸ್ತಕಗಳನ್ನೂ ಓದಬೇಕೆಂದು ಸಲಹೆ ನೀಡಿದರು.
ನನ್ನ ವೃತ್ತಿ ಜೀವನದಲ್ಲಿ ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರಿಂದ ವಕೀಲರು ಹಾಗೂ ಸಹೋದ್ಯೋಗಿಗಳು ಆಹ್ವಾನಿಸಿದ ಯಾವ ಕಾರ್ಯಕ್ರಮಗಳಿಗೂ ಹೋಗಲಾಗಲಿಲ್ಲ. ಹೀಗಾಗಿ, ಈ ವಿಚಾರಗಳನ್ನು ಯಾರೂ ಮನಸ್ಸಿನಲ್ಲಿಟ್ಟುಕೊಳ್ಳದೆ ಕ್ಷಮಿಸಬೇಕೆಂದು ವಿನಂತಿ ಮಾಡಿಕೊಂಡರು.
ಈ ಸಮಾಜದಲ್ಲಿ ನಾನಾ ರೀತಿಯ ಜನರಿದ್ದು, ಯಾರನ್ನೂ ಕೀಳು ಹಾಗೂ ಮೇಲು ಎಂದು ಕಾಣದೆ ಎಲ್ಲರನ್ನೂ ಗೌರವಿಸುವ ಕೆಲಸ ಮಾಡೋಣ ಎಂದು ಹೇಳಿದರು. ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮಾತನಾಡಿ, ನ್ಯಾಯಮೂರ್ತಿ ರತ್ನಕಲಾ ಅವರು ಪರಿಶ್ರಮ, ಶ್ರದ್ಧೆ, ಸಮಯ ಪ್ರಜ್ಞೆಯಿಂದಲೇ ಉತ್ತಮ ತೀರ್ಪುಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖಜಾಂಚಿ ಶಿವಮೂರ್ತಿ, ವಕೀಲ ಅಮೃತೇಶ, ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಉಪಸ್ಥಿತರಿದ್ದರು.







