ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ನಟಿ ಸುಪ್ರಿಯಾ ದೇವಿ ನಿಧನ
ಕೊಲ್ಕತ್ತಾ, ಜ.26: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಬಂಗಾಳಿ ನಟಿ ಸುಪ್ರಿಯಾ ದೇವಿಯವರು ಸುದೀರ್ಘ ಕಾಲದ ಅನಾರೋಗ್ಯದ ನಂತರ ಶುಕ್ರವಾರದಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಸುಪ್ರಿಯಾ ದೇವಿಯ ಸಾವಿನ ಸುದ್ದಿಯನ್ನು ಆಕೆಯ ಮಗಳಾದ ಸೊಮಾ ಚಟ್ಟೋಪಾಧ್ಯಾಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
1935ರಲ್ಲಿ ಬರ್ಮಾದಲ್ಲಿ ಜನಿಸಿದ ಸುಪ್ರಿಯಾ ಅವರನ್ನು ಆಕೆಯ ತಂದೆಯವರಾದ ಗೋಪಾಲ ಚಂದ್ರ ಬ್ಯಾನರ್ಜಿಯವರು ಆಕೆಯನ್ನು ಏಳರ ಹರೆಯದಲ್ಲೇ ರಂಗಭೂಮಿಗೆ ಪರಿಚಯಿಸಿದರು. ಆಕೆಯ ಸಾವಿನಿಂದ ಬಂಗಾಳಿ ಸಿನೆಮಾದ ಇತಿಹಾಸದಲ್ಲಿ ಒಂದು ಅಧ್ಯಾಯವೇ ಕೊನೆಗೊಂಡಂತಾಗಿದೆ ಎಂದು ಚಿತ್ರರಂಗದ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.
ಬಾಸು ಪರಿವಾರ್ ಸಿನೆಮಾದ ಮೂಲಕ ಆ ಕಾಲದ ಬಂಗಾಳಿ ಸೂಪರ್ಸ್ಟಾರ್ ಉತ್ತಮ್ ಕುಮಾರ್ಗೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಸುಪ್ರಿಯಾ ದೇವಿ ಆನಂತರ ಉತ್ತಮ್ ಕುಮಾರ್ ಜೊತೆಗೆ ಹಲವು ಸಿನೆಮಾಗಳಲ್ಲಿ ನಟಿಸುವ ಮೂಲಕ ಬಂಗಾಳಿ ಚಿತ್ರರಂಗವನ್ನು ಆಳಿದ್ದರು. ರಿತ್ವಿಕ್ ಗಟಕ್ ಅವರ ಮೇಘ ಡಾಕ ತಾರಾ ಮುಂತಾದ ಸಿನೆಮಾಗಳ ಮೂಲಕ ಆಕೆ ತನ್ನ ನಟನಾ ಕೌಶಲ್ಯವನ್ನು ಜಗತ್ತಿಗೆ ಪ್ರದರ್ಶಿಸಿದ್ದರು.
2014ರಲ್ಲಿ ಸರಕಾರ ಆಕೆಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸುಪ್ರಿಯಾ ದೇವಿಯವರು ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಬಂಗ-ವಿಭೂಷಣ ಪ್ರಶಸ್ತಿಗೂ ಬಾಜನರಾಗಿದ್ದಾರೆ. ಎರಡು ಬಾರಿ ಅವರನ್ನು ಬಿಎಫ್ಜೆಎ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2006ರ ವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸುಪ್ರಿಯಾ ದೇವಿಯವರು 45 ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವರ ಕೊನೆಯ ಸಿನೆಮಾ ನೇಮ್ಸೇಕ್.