ಸ್ನೇಹಾಗೆ ನಿರಾಶೆ ತಂದ "ವೇಲೈಕ್ಕಾರನ್"
ದಕ್ಷಿಣಭಾರತದ ಬಹುಭಾಷಾ ನಟಿ ಸ್ನೇಹಾ, ‘ವೇಲೈಕ್ಕಾರನ್’ ಚಿತ್ರಕ್ಕೆ ತಾನು ಆಯ್ಕೆಯಾದ ಬಳಿಕ ಆಕೆಯ ಸಂತಸಕ್ಕೆ ಪಾರವೇ ಇರಲಿಲ್ಲ. ಶಿವಕಾರ್ತಿಕೇಯನ್ ಅಭಿನಯದ ವೇಲೈಕ್ಕಾರನ್ನಲ್ಲಿ ತನ್ನ ಪಾತ್ರದ ಬಗ್ಗೆ ಆಪಾರ ನಿರೀಕ್ಷೆಯಿಟ್ಟುಕೊಂಡಿದ್ದರು. ಅಷ್ಟೇ ಅಲ್ಲ ಚಿತ್ರಕ್ಕಾಗಿ ಸಾಕಷ್ಟು ಡಯಟಿಂಗ್ ಮಾಡಿ, ತನ್ನ ದೇಹತೂಕ ಕೂಡಾ ಇಳಿಸಿಕೊಂಡಿದ್ದರು.
ಆದರೆ ಸ್ನೇಹಾ ಎನಿಸಿದ್ದೊಂದು, ನಡೆದಿದ್ದು ಇನ್ನೊಂದು. ‘ವೇಲೈಕ್ಕಾರನ್’ಗಾಗಿ ಆಕೆ 18 ದಿನಗಳ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ತನ್ನ ಪಾತ್ರವು ತೆರೆಯಲ್ಲಿ ಕನಿಷ್ಠ 15 ನಿಮಿಷಗಳ ತನಕವಾದರೂ ಇರಬಹುದೆಂದು ಅಂದುಕೊಂಡಿದ್ದರು. ಆದರೆ ಬೆಳ್ಳಿತೆರೆಯಲ್ಲಿ ಕೇವಲ 5 ನಿಮಿಷವಷ್ಟೇ ತಾನು ಕಾಣಿಸಿಕೊಂಡಿರುವುದನ್ನು ಕಂಡು ಸ್ನೇಹಾಗೆ ನಿರಾಶೆಯಾಗಿದೆ. ತನ್ನ ಪಾತ್ರವು ಚಿತ್ರದ ಜೀವಾಳವಾಗಲಿದೆಯೆಂದು ಸ್ನೇಹಾಗೆ ನಿರ್ದೇಶಕ ಮೋಹನ್ ರಾಜಾ, ಚಿತ್ರೀಕರಣದ ವೇಳೆ ತಿಳಿಸಿದ್ದರು. ಆದರೆ ಇಂತಹ ಪಾತ್ರ ತನಗೆ ಹಲವಾರು ಸಲ ದೊರೆತಿದ್ದು, ಅದರಲ್ಲಿ ವಿಶೇಷವೇನೂ ಇಲ್ಲವೆಂದು ಸ್ನೇಹಾ ಬೇಸರ ತೋಡಿಕೊಂಡಿದ್ದಾರೆ.
ಶಿವಕಾರ್ತಿಕೇಯನ್, ಫಹದ್ ಫಾಝಿಲ್, ನಯನತಾರಾ ಮುಖ್ಯಪಾತ್ರಗಳಲ್ಲಿರುವ ‘ವೇಲೈಕ್ಕಾರನ್’ ಕಳೆದ ವರ್ಷದ ಡಿಸೆಂಬರ್ 22ರಂದು ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.