ಉಡುಪಿ ಜಿಲ್ಲೆಯಲ್ಲಿ ಆರು ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ: ಸಚಿವ ಪ್ರಮೋದ್

ಉಡುಪಿ, ಜ.26: ಉಡುಪಿ ಜಿಲ್ಲೆಯಲ್ಲಿ ಆರು ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆಗೆ ಮಂಜೂರಾತಿ ದೊರಕಿದ್ದು, ಈ ಶಾಲೆಗಳ ಮೂಲಭೂತ ಸೌಕರ್ಯ ಗಳಿಗಾಗಿ ಪ್ರತಿ ಶಾಲೆಗೆ ತಲಾ 10ಲಕ್ಷ ರೂ. ಅನುದಾನವನ್ನು ಸರಕಾರ ಬಿಡು ಗಡೆ ಮಾಡಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಗಣರಾಜ್ಯೋತ್ಸವ ಸಂದೇಶ ನೀಡಿದರು.
ರಾಜ್ಯ ಸರಕಾರ ಈ ಸಾಲಿನಲ್ಲಿ ‘ಒಂದು ಬಾರಿ ವೆಚ್ಚವಾಗಿ ಭರಿಸುವ ಯೋಜನೆ’ಯಡಿ ಉಡುಪಿ ಜಿಲ್ಲೆಗೆ 15.40ಕೋ.ರೂ. ಅನುದಾನಕ್ಕೆ ಮಂಜೂ ರಾತಿ ನೀಡಿದ್ದು, ಇದರಲ್ಲಿ 4.82ಕೋಟಿ ರೂ. ಮೊತ್ತದ ಆರು ಸರಕಾರಿ ಆಸ್ಪತ್ರೆ ಗಳ ಕಟ್ಟಡ ದುರಸ್ತಿ ಮತ್ತು ನಿರ್ಮಾಣ, 60ಲಕ್ಷ ರೂ. ಮೊತ್ತದ ಆರು ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣ, 9.63ಕೋಟಿ ರೂ. ಮೊತ್ತದ 79 ಸರಕಾರಿ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವಂತೆ ಮಂಜೂರಾತಿ ನೀಡಲಾಗಿದೆ ಎಂದರು.
ಪಶ್ಚಿಮ ವಾಹಿನಿ ಯೋಜನೆಯಡಿ 52.60ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು /ಉಪ್ಪು ನೀರು ತಡೆ ಅಣೆಕಟ್ಟುಗಳ ನಿರ್ಮಾಣದ ಕ್ರಿಯಾ ಯೋಜನೆ ಅನು ಮೋದನೆಗೊಂಡಿದ್ದು, ಅಂದಾಜು ಪಟ್ಟಿಗಳನ್ನು ಮಂಜೂರಾತಿಗೆ ಸಲ್ಲಿಸಲಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನ ಒಂದನೆ ಮತ್ತು ಎರಡನೆ ಹಂತದ ಉತ್ತರ ಭಾಗದ 5ಕೋಟಿ ರೂ. ವೆಚ್ಚದ ವಿಸ್ತರಣಾ ಕಾಮಗಾರಿಯ ಅಂದಾಜುಪಟ್ಟಿಗೆ ಅನುಮೋದನೆ ದೊರೆತಿದೆ ಎಂದು ಅವರು ಹೇಳಿದರು.
4,040 ರೂ. ವೆಚ್ಚದಲ್ಲಿ ಅಡುಗೆ ಅನಿಲ ಸಂಪರ್ಕ ಉಚಿತವಾಗಿ ನೀಡುವ ಮುಖ್ಯಮಂತ್ರಿ ಅನಿಲ ಯೋಜನೆಯಡಿ ಜಿಲ್ಲೆಯಲ್ಲಿ ಮೊದಲನೆ ಹಂತದಲ್ಲಿ ನಿಗದಿಪಡಿಸಿದ 11,059 ಫಲಾನುಭವಿಗಳಲ್ಲಿ 10,576 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಿಗಿ, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಪಂ ಸಿಇಓ ಶಿವಾನಂದ ಕಾಪಶಿ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸರಕಾರಿ ಅಧಿಕಾರಿಗಳಿಗೆ ಸರ್ವೊತ್ತಮ ಸೇವಾ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು. 5 ಮಂದಿ ಕ್ರೀಡಾಪಟುಗಳನ್ನು ಸನ್ಮಾನಿಸ ಲಾಯಿತು. ವಿಕಲಚೇತನರ ಸಬಲೀಕರಣ ಇಲಾಖೆಯಿಂದ 12 ಅಂಧ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಕರ್ಷಕ ಪಥಸಂಚಲನ ಹಾಗೂ ಗೌರವ ರಕ್ಷೆ ಸ್ವೀಕರಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಕಾಪು, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕುಗಳನ್ನು ರಚನೆ ಮಾಡಿ ಹೊಸ ತಾಲೂಕು ಕಚೇರಿಗಳನ್ನು ತೆರೆಯಲು ತಾತ್ವಿಕವಾಗಿ ಅನುಮೋದನೆಯನ್ನು ಸರಕಾರ ನೀಡಿದ್ದು, ಪ್ರಥಮ ಹಂತದಲ್ಲಿ ಹೊಸ ತಾಲೂಕು ಕಚೇರಿಗೆ ಅಗತ್ಯವಿರುವ ಒಟ್ಟು 17 ಅಧಿಕಾರಿ/ಸಿಬ್ಬಂದಿಗಳ ಹುದ್ದೆಯನ್ನು ಸೃಜಿಸಿ ಆದೇಶ ಹೊರಡಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.







