ಜ.27: ಎಸ್‌ಸಿಡಿಸಿಸಿ ಬ್ಯಾಂಕ್ ನೌಕರರ ಕ್ರೀಡಾಕೂಟ
ಉಡುಪಿ, ಜ.26: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟ ಮಂಗಳೂರು ಇದರ ವತಿಯಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಥೆಯ ನೌಕರರ ಕ್ರೀಡಾಕೂಟ ಜ.27ರಂದು ಉಡುಪಿಯ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ನೌಕರರ ಒಕ್ಕೂಟದ ಅಧ್ಯಕ್ಷ ಜಯರಾಜ್ ಶೆಟ್ಟಿ ತಿಳಿಸಿದ್ದಾರೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟವನ್ನು ಬೆಳಗ್ಗೆ 10ಕ್ಕೆ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ವಿ.ನಿಂಬರ್ಗಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ ಶೆಟ್ಟಿ, ನಿವೃತತ ದೈಹಿಕ ನಿರ್ದೇಶಕ ಚಂದ್ರಶೇಖರ್ ಹೆಗ್ಡೆ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ ಕೊಲ್ಲೂರಿನ ಕರುಣಾಕರ ಶೆಟ್ಟಿ ಭಾಗವಹಿಸಲಿದ್ದಾರೆ.
ಕ್ರೀಡಾಕೂಟದಲ್ಲಿ ಕರಾವಳಿ ಎರಡು ಜಿಲ್ಲೆಗಳ 8 ತಾಲೂಕುಗಳ ಎಸ್‌ಸಿಡಿಸಿಸಿ ಬ್ಯಾಂಕಿನ 350ಕ್ಕೂ ಅಧಿಕ ಸಿಬ್ಬಂದಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪುರುಷರು ಮತ್ತು ಮಹಿಳೆಯರಿಗೆ 35 ವರ್ಷ ಕೆಳಗಿನವರು, 35ರಿಂದ 45 ವರ್ಷದೊಳಗಿನವರು ಹಾಗೂ 45ವರ್ಷ ಮೇಲಿನವರು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ ಎಂದರು.
ವಿವಿಧ ಆಟೋಟಗಳಲ್ಲದೇ ಹಗ್ಗಜಗ್ಗಾಟ, ವಾಲಿಬಾಲ್ ಸ್ಪರ್ಧೆಗಳೂ ನಡೆಯಲಿವೆ. ವಿಜೇತರಿಗೆ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಒಕ್ಕೂಟದ ವಾರ್ಷಿಕ ಮಹಾಸಬೆಯಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಜಯರಾಜ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕ್ರೀಡಾ ಕಾರ್ಯದರ್ಶಿ ಜಯಂತ ಕುಮಾರ್, ಸಂಘಟನಾ ಕಾರ್ಯದರ್ಶಿ ಅಶೋಕ ಶೆಟ್ಟಿ, ಜೊತೆ ಕಾರ್ಯದರ್ಶಿ ಕರುಣಾಕರ ಶೆಟ್ಟಿ, ಮೋಹನದಾಸ್ ಹೆಬ್ಬಾರ್ ಉಪಸ್ಥಿತರಿದ್ದರು.







