ತ್ರಿವಳಿ ತಲಾಖ್ ಮಸೂದೆಯಿಂದ ಮುಸ್ಲಿಂ ಮಹಿಳೆಯರ ಕುಟುಂಬ ಬೀದಿಪಾಲು: ನಬಿರಾ ಮೊಹ್ತಿಶಾಮ್ ಆರೋಪ

ಭಟ್ಕಳ, ಜ.26: ಮುಸ್ಲಿಮ್ ಮಹಿಳೆಯರ ಕುರಿತಂತೆ ಅನುಕಂಪದ ಮೊಸಳೆ ಕಣ್ಣೀರು ಸುರಿಸುತ್ತಿರುವ ಕೇಂದ್ರ ಸರಕಾರ ತ್ರಿವಳಿ ತಲಾಕ್ ಮಸೂದೆಯಿಂದ ಮುಸ್ಲಿಮ್ ಮಹಿಳೆ ಹಾಗೂ ಆಕೆಯ ಕುಟುಂಬವನ್ನು ಬೀದಿಪಾಲು ಮಾಡುವ ಹುನ್ನಾರ ನಡೆಸಿದೆ ಎಂದು ಭಟ್ಕಳ ಮುಸ್ಲಿಮ್ ಮಹಿಳಾ ರಾಬಿತಾ ಮಿಲ್ಲತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಬಿರಾ ಮೊಹ್ತಿಶಾಮ್ ಆರೋಪಿಸಿದ್ದಾರೆ.
ಈ ಕುರಿತು ಗುರುವಾರ ಸಂಜೆ ರಾಬಿತಾ ಸೂಸೈಟಿಯ ಸಭಾಂಗಣದಲ್ಲಿ ಮುಸ್ಲಿಮ್ ಮಹಿಳೆಯರ ಜಾಗೃತಿ ಸಮಾವೇಶದ1 ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಲಾಮಿ ಷರೀಅತ್ ಕಾನೂನು ಸಂಪೂರ್ಣವಾಗಿದೆ. ಇದರಲ್ಲಿ ಇನ್ನಾರದೋ ಹಸ್ತಕ್ಷೇಪವನ್ನು ಮುಸ್ಲಿಮರು ಸಹಿಸಲ್ಲ, ಕೇಂದ್ರ ಸರಕಾರ ವಿನಾಃಕಾರಣ ಷರೀಅತ್ ಕಾನೂನಿನಲ್ಲಿ ಮೂಗು ತೂರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಮುಸ್ಲಿಮ್ ಮಹಿಳೆಯರು ಷರೀಅತ್ ಕಾನೂನಿನಡಿ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ. ಕೇಂದ್ರದ ಕೆಟ್ಟದೃಷ್ಟಿಯ ಪರಿಣಾಮ ಅದು ಇಂದು ಅಪಾಯ ದಲ್ಲಿದೆ. ಲೋಕಸಭೆಯಲ್ಲಿ ಮಂಡಿಸಿದ ಬಿಲ್ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು ಸೋಕಾಲ್ಡ್ ಸೆಕ್ಯೂಲರ್ ಪಕ್ಷಗಳೂ ಇದಕ್ಕೆ ಬೆಂಬಲಿಸುತ್ತಿರುವುದು ನಮಗೆ ನೋವುಂಟು ಮಾಡಿದೆ ಎಂದರು.
ಇದಕ್ಕಾಗಿ ನಾವು ರಾಜ್ಯಸಭೆಯ ಸದಸ್ಯರಿಗೆ ಈಮೇಲ್ ಮಾಡುವ ಅಭಿಯಾನದ ಮೂಲಕ ಯಾವುದೇ ಕಾರಣಕ್ಕೂ ಮಸೂದೆ ಪಾಸ್ ಆಗ ದಂತೆ ತಡೆಯುತ್ತೇವೆ. ಕೆಲ ಮಾಧ್ಯಮಗಳು ಮುಸ್ಲಿಮ್ ಉಲೇಮಾಗಳನ್ನು ಚರ್ಚೆಗೆ ಕರೆದು ಅವರನ್ನು ಅವಮಾನಿಸುತ್ತಿರುವುದು ಕಂಡು ಬರುತ್ತಿದ್ದು, ಇಂತಹದ್ದನ್ನು ನಾವು ಸಹಿಸುವುದಿಲ್ಲ. ಹಿಂದೂ ಆಶ್ರಮಗಳಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಶೋಷಣೆ, ಲಿತರ ಮೇಲಿನ ದಾಳಿಯಂತಹ ವಿಷಯಗಳ ಚರ್ಚಿಸಲು ಬೇಕಾದಷ್ಟಿವೆ. ಇವುಗಳನ್ನು ಬಿಟ್ಟು ಮುಸ್ಲಿಮರನ್ನು ಗುರಿಯಾಗಿಸಿ ಅವರನ್ನು ಅಪಮಾನಿಸುವುದು, ಅವರ ವೈಯಕ್ತಿಕ ವಿಷಯಗಳನ್ನು ಕೆದಕುವುದು ಮಾಡುತ್ತಿರುವುದು ಅಸಹನೀಯವಾಗಿದೆ ಎಂದರು.
ಝರೀನಾ ಕೋಲಾ ಮಾತನಾಡಿ, ಷರೀಅತ್ ಕಾನೂನು ಮಹಿಳೆಯರಿಗೆ ಎಲ್ಲ ರೀತಿಯ ರಕ್ಷಣೆಯನ್ನು ನೀಡಿದ್ದು, ಯಾರೋ ತಿಳಿಗೇಡಿ ವ್ಯಕ್ತಿ ಮಾಡಿದ ವೈಯಕ್ತಿಕ ವಿವಾದಕ್ಕೆ ಸರಕಾರ ಹಾಗೂ ಮಾಧ್ಯಮಗಳು ಇಷ್ಟೊಂದು ಆಸಕ್ತಿ ತೋರಿಸಿ ಅದನ್ನು ಮಸೂದೆಯ ಮೂಲಕ ತಡೆಯುವ ಪ್ರಯತ್ನ ಸಲ್ಲದು ಎಂದರು.
ಮುಸ್ಲಿಮ್ ಮಹಿಳಾ ರಾಬಿತಾ ಮಿಲ್ಲತ್ ಸಮಿತಿಯ ಅಧ್ಯಕ್ಷೆ ಝೀನತ್ ಆಪಾ ರುಕ್ನುದ್ದೀನ್, ಸದಸ್ಯರಾದ ಸಬಿಹಾ ಕೌಡಾ ಫಾರೂಖ್ ಮುಂತಾದವರು ಉಪಸ್ಥಿತರಿದ್ದರು.







