ನಿತ್ಯೋತ್ಸವ ಕವಿ ನಮ್ಮ ‘ರಸಋಷಿ’: ಸಿದ್ದಲಿಂಗಯ್ಯ
ಬೆಂಗಳೂರು, ಜ.26: ನಿತ್ಯೋತ್ಸವ ಕವಿ, ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ನಮ್ಮ ಕಾಲದ ರಸಋಷಿ ಆಗಿದ್ದಾರೆ ಎಂದು ದಲಿತ ಕವಿ ಸಿದ್ದಲಿಂಗಯ್ಯ ಬಣ್ಣಿಸಿದರು.
ಶುಕ್ರವಾರ ನಗರದ ಗಾಂಧಿನಗರದ ಸಪ್ನ ಬುಕ್ ಹೌಸ್‌ನಲ್ಲಿ ಆಯೋಜಿಸಿದ್ದ ಓದುಗರೊಡನೆ ಒಂದಷ್ಟು ಸಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನಾಡಿನ ಅಪರೂಪದ ಕವಿ ನಿಸಾರ್ ಅಹ್ಮದ್, ಅವರ ಜೀವನ ನಮಗೆಲ್ಲಾ ಮಾದರಿಯಾಗಿದೆ. ಅಲ್ಲದೆ, ಇಂದಿಗೂ ಅವರು ನಮ್ಮ ಕಾಲದ ‘ರಸಋಷಿ’ ಎಂದರು.
ಸಿನೆಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಪ್ರವಾಸ ಕತೆ ಬರೆಯಲು ಈ ಬಾರಿ ಜಪಾನ್‌ಗೆ ಹೊರಡಲಿದ್ದಾರೆ. ಹೀಗಾಗಿ, ಅವರಿಗೊಂದು ಪ್ರಶ್ನೆ ಕೇಳುವೆ ಎಂದು ಮಾತು ಆರಂಭಿಸಿದ ಸಿದ್ದಲಿಂಗಯ್ಯ, ನೀವು ಜಪಾನ್‌ಗೆ ಹೋದರೆ, ಪಕ್ಕದಲ್ಲಿಯೇ ಉತ್ತರ ಕೋರಿಯಾ ದೇಶ ಇದೆ. ಮೂರನೆ ಮಹಾಯುದ್ಧ ಯಾವಾಗ ಎಂದು ತಿಳಿದುಕೊಂಡು ಬಂದುಬಿಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬಂಡಾಯ ಸಾಹಿತಿಗಳು ಪ್ರೇಮ ಕವನ ಬರೆಯಬಾರದೆಂದು ಪ್ರತೀತಿ ಇತ್ತು. ಆದರೂ ನಾನು ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ’ ಬರೆದೆ. ಅದೇ ರೀತಿ, ‘ಗೆಳತಿ ಓ ಗೆಳತಿ’ ಬರೆದಾಗಲೂ ದೊಡ್ಡ ಗಲಾಟೆಯೇ ನಡೆದಿತ್ತು. ಈಗಲೂ ಪ್ರೇಮ ಗೀತೆ ಬರೆಯುವ ಹಂಬಲ ನನಗೆ ಇದೆ. ಆದರೆ, ಮನೆಗೆ ಹೋಗಲು ಭಯ ಆಗುತ್ತೆ ಎಂದು ಹೇಳಿ ಸಿದ್ದಲಿಂಗಯ್ಯ ನಕ್ಕರು.
ನಾನು ಹಳೇ ರೌಡಿ: ಇದೇ ವೇಳೆ ಓದುಗನೊಬ್ಬ, ‘ಡಾ.ಸಿದ್ದಲಿಂಗಯ್ಯನವರೇ ಯಾವಾಗ ತೆಗೆಯುತ್ತೀರಿ ನಿಮ್ಮ ಗಡ್ಡ-ಚುಂಬಿಸಿದಾಗ ಬರುವುದಿಲ್ಲವೇ ಅಡ್ಡ’ ಎಂದು ಹನಿಗವನದ ಮೂಲಕ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಗಡ್ಡದಿಂದಲೇ ನನಗೆ ಒಂದು ರೀತಿಯ ವ್ಯಕ್ತಿತ್ವ ಬಂದಿದೆ. ಗಡ್ಡ ತೆಗೆದರೆ ಗುರುತಿಸುವುದಿಲ್ಲ. ಅಲ್ಲದೆ, ಒಮ್ಮೆ ಗಲಾಟೆಯಲ್ಲಿ ಮುಖದ ಮೇಲೆ ಗುರುತು ಬಿದ್ದಿದೆ. ಇನ್ನು ಗಡ್ಡ ತೆಗೆದರೆ ನಾನು ಹಳೆ ರೌಡಿಯಂತೆಯೇ ಕಾಣುತ್ತೇನೆ ಎಂದರು.







