ಮಹಾದಾಯಿ: ಮೋದಿ ಗೋವಾಕ್ಕೆ ಮಾತ್ರ ಪಿಎಂ ಅಲ್ಲ- ಪ್ರಮೋದ್
ಉಡುಪಿ, ಜ.26: ಮಹಾದಾಯಿ ಕುರಿತು ಯಡಿಯೂರಪ್ಪ ಹೇಳಿದ್ದ ಗೋವಾ ಮುಖ್ಯಮಂತ್ರಿಯಿಂದ ಸಿಹಿ ಸುದ್ದಿ ಇನ್ನು ಬಂದಿಲ್ಲ. ಹಾಗಾಗಿ ಮಹಾದಾಯಿ ವಿಚಾರದಲ್ಲಿ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಅವರ ಮೌನ ಕೂಡ ಅದನ್ನೇ ತೋರಿಸುತ್ತದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವ ರಾಜ್ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನರೇಂದ್ರ ಮೋದಿ ಕೇವಲ ಗೋವಾ ರಾಜ್ಯಕ್ಕೆ ಮಾತ್ರ ಪ್ರಧಾನ ಮಂತ್ರಿ ಅಲ್ಲ. ಅವರು ಕರ್ನಾಟಕದ ಹಿತ ಕೂಡ ಕಾಪಾಡಬೇಕು. ಕರ್ನಾಟಕದ ನೆಲ ಜಲದ ವಿಚಾರ ದಲ್ಲಿ ಕೇಂದ್ರ ಸರಕಾರ ಕೂಡಲೇ ಸ್ಪಂದಿಸಬೇಕು. ಆ ಸ್ಪಂದನೆಯನ್ನು ರಾಜ್ಯದ ಜನತೆ ಬಯಸುತ್ತಿದ್ದಾರೆ ಎಂದರು.
ದಿಲ್ಲಿಯ ರಾಜ್‌ಪಥ್‌ನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ನಾಲ್ಕನೆ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎಲ್.ಕೆ.ಅಡ್ವಾಣಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಯುಪಿಎ ಸರಕಾರ ಅವರಿಗೆ ಪ್ರಥಮ ಸಾಲಿನಲ್ಲಿ ಸೀಟು ಕೊಟ್ಟಿತ್ತು. ಯುಪಿಎ ಸರಕಾರ ವಿರೋಧ ಪಕ್ಷವನ್ನು ಗೌರವಿಸುವ ದೊಡ್ಡ ಗುಣ ಹೊಂದಿದೆ. ಆದರೆ ಎನ್‌ಡಿಎ ಸರಕಾರ ವಿರೋಧ ಪಕ್ಷವನ್ನು ಕಡೆಗಣಿಸುತ್ತಿದೆ. ಇದು ಅವರ ಮನೋಭಾವದ ಪ್ರತಿಬಿಂಬ. ನಮ್ಮ ರೀತಿಯ ವಿಶಾಲ ಮನೋಭಾವ ಬಿಜೆಪಿ ಯಲ್ಲಿ ಇಲ್ಲ ಎಂಬುದು ಈಗ ಖಾತ್ರಿಯಾಗುತ್ತಿದೆ ಎಂದರು.







